( “ಆಕೃತಿ ಜಾಲಪತ್ರಿಕೆಯಲ್ಲಿ "ಕೊರಳ ಹೂಮಾಲೆ ಹೂಲಿ" ಸರಣಿಯಲ್ಲಿ ಪ್ರಕಟವಾದ ಬರಹ)
ಸುಮಾರು ಕ್ರಿ.ಶ
೧೬೫೦ರ ಕಾಲದ ಶಿವಕವಿ ಸಿದ್ಧನಂಜೇಶನು ಹೂಲಿಯವನು. ಹೂಲಿಯಲ್ಲಿ ಗುರುಸಿದ್ಧನಂಜೇಶ್ವರರ ಆಶ್ರಯದಲ್ಲಿ
ವಿದ್ಯಾಭ್ಯಾಸ ಮಾಡಿದವನು, 'ರಾಘವಾಂಕ ಚರಿತೆ', 'ತೋಂಟದ ಸಿದ್ಧದೇಶಿಕನ ಭಾವರತ್ನಾಭರಣಿ’, ‘ಬಸವ ಶತಕ’ ಮತ್ತು ‘ಗುರುರಾಜ ಚಾರಿತ್ರ'-ಇವು ಇವನು ರಚಿಸಿದ ಕೃತಿಗಳು. 'ರಾಘವಾಂಕ
ಚರಿತೆ' ವನ್ನು ಬರೆಯುವಾಗ ತನ್ನುನ್ನು ತಾನು ʼಚಿಕ್ಕನಂಜೇಶʼ ಎಂದು
ಕರೆದುಕೊಂಡಿರುವ ಆತ, ಮುಂದೆ ಪ್ರೌಢನಾಗಿ ನಂದ್ಯಾಲದ ಪೀಠಾಧಿಪತಿಯಾದ ಬಳಿಕ, ‘ಗುರುರಾಜ ಚಾರಿತ್ರ' ಬರೆಯುವ
ಸಮಯದಲ್ಲಿ ತನ್ನ ಹೆಸರನ್ನು ಸಿದ್ಧನಂಜೇಶ ಎಂದು ಹೇಳಿಕೊಂಡಿದ್ದಾನೆ.
ಗುರುರಾಜ ಚಾರಿತ್ರ
“ಗುರುರಾಜ ಚಾರಿತ್ರ”ವು ವೀರಶೈವ ಸಂಪ್ರದಾಯದ ಗುರುಗಳ ಚರಿತ್ರೆಯನ್ನು
ಹೇಳುವ ಷಟ್ಪದಿ ಕಾವ್ಯ. ಕವಿ ಈ ಕಾವ್ಯದ ಮೊದಲ ಅಧ್ಯಾಯದಲ್ಲಿ ತನ್ನ ಗುರು ಗುರುಸಿದ್ಧನಂಜೇಶ,
ಬಸವೇಶ್ವರ, ಪೂರ್ವದ ಕವಿಗಳನ್ನು, ತನ್ನ ಗುರುಪರಂಪರೆಯನ್ನು ಪ್ರಾರ್ಥಿಸಿ, ನಂತರ ಈ ಕಾವ್ಯದ
ಸಂದರ್ಭವನ್ನು ವಿವರಿಸುತ್ತಾನೆ. ಈ ಕಾವ್ಯದಲ್ಲಿ ಪಂಚಾಚಾರ್ಯರ ಚರಿತ್ರೆಯನ್ನು ಶಿವನು ಪಾರ್ವತಿಗೆ
ಹೇಳಿದ್ದನ್ನು, ಗುರುಸಿದ್ಧನಂಜೇಶ ತನ್ನ ಪತ್ನಿ ಚನ್ನಾಂಬಿಕೆಗೆ ಹೇಳಿದಂತೆ ನಿರೂಪಿಸಲಾಗಿದೆ ಎಂದು
ಹೇಳಿ ಹೂಲಿಯ ಹತ್ತಿರದ ಇತರ ಪುಣ್ಯಕ್ಷೇತ್ರಗಳಾದ ಸೊಗಲ-ನವಿಲುತೀರ್ಥಗಳ ಸಂಕ್ಷಿಪ್ತ ವರ್ಣನೆ
ಮಾಡಿ, ಹೂಲಿಯ ವರ್ಣನೆಗೆ ಬಹುಭಾಗವನ್ನು ಮೀಸಲಿಟ್ಟಿದ್ದಾನೆ.
ನಮ್ಮ ಈ ಬರಹದಲ್ಲಿ “ಗುರುರಾಜ ಚಾರಿತ್ರ”ದ ಮೊದಲ ಅಧ್ಯಾಯದ ಹೂಲಿಗೆ
ಸಂಬಂಧಿಸಿದ ಒಟ್ಟು ೧೩ ಪದ್ಯಗಳನ್ನು, ಅವುಗಳ ಭಾವಾನುವಾದವನ್ನು ಕೊಡಲಾಗಿದೆ. ಪದ್ಯಗಳ ಪಠ್ಯ ಓರೆ
ಅಕ್ಷರಗಳಲ್ಲಿದೆ, ಉಳಿದ ಬರಹ ನೇರ ಅಕ್ಷರಗಳಲ್ಲಿದೆ. ಬಹುತೇಕ ಕಠಿಣಪದಗಳ ಅರ್ಥಗಳನ್ನು ಭಾವಾನುವಾದದಲ್ಲಿಯೇ
ವಿವರಿಸಲಾಗಿದೆ – ಉಳಿದ ಪದಗಳ ಅರ್ಥವನ್ನು ಬರಹದ ಕೊನೆಗೆ ಪಟ್ಟಿಯಲ್ಲಿ ಕೊಡಲಾಗಿದೆ.
ಶಿವಕವಿ ಸಿದ್ಧನಂಜೇಶ ತನ್ನ
ಕಾವ್ಯದಲ್ಲಿ ಹೂಲಿಯನ್ನು ವರ್ಣಿಸಿದ ಬಗೆಯನ್ನು ಓದಿ, ಅರ್ಥೈಸಿ, ಆನಂದಿಸೋಣ ಬನ್ನಿ..
ಪದ್ಯ೧:
ಕವಿಯ ಹೂಲಿಯ ಬಗೆಗಿನ ಪ್ರೀತಿ ಒಂದನೆ ಅಧ್ಯಾಯದ ೨೫ನೇ ಪದ್ಯದಲಿ
ಹರಳುಕಟ್ಟಿದೆ:
ಕಾಶಿಗಿಂದಂ
ಮಿಗಿಲು ಕೇದಾರಕಿಂದಧಿಕ
ಶ್ರೀಶೈಲಕಿಂ
ಮೇಲು ಹಂಪೆಗಿಂದಂ ಹೆಚ್ಚು
ವಾಸಿ
ಗೋಕರ್ಣ
ದ್ರಾಕ್ಷಾರಾಮಕಿಂ ಚಿದಂಬರಕಿಂದ ಘನವಾದುದು
ಆ
ಸೇತುಬಂಧಕಿಂದುನ್ನತಂ ಭೂಭಾಗ
ದಾ
ಸಕಲಸಿದ್ಧಿಗಳ ಕೊಡುವ ತೀರ್ಥಂಗಳಿಗೆ
ಸಾಸಿರಕ್ಕಗಣಿತಂ ಸದ್ ಗುರುಕ್ಷೇತ್ರಕ್ಕೆಯೆಣಿಯಾದ
ಕ್ಷೇತ್ರಮೊಳವೇ? ||೨೫||
ವಿಶ್ವನಾಥನ ಕಾಶಿಗಿಂತ, ಕೇದಾರನಾಥನ ಕೇದಾರ, ಮಲ್ಲಿಕಾರ್ಜುನನ ಶ್ರೀಶೈಲ,ವಿರುಪಾಕ್ಷನ
ಹಂಪೆ, ಮಹಾಬಲನ ಗೋಕರ್ಣ, ದಕ್ಷನ ಯಜ್ಞ ಭಂಗಮಾಡಿ ಶಿವ, ದಾಕ್ಷಾಯಣಿಯನ್ನು ಹೊತ್ತು ಸಾಗಿದ ದ್ರಾಕ್ಷಾರಾಮಕ್ಕಿಂತ, ಚಿದಂಬರಕ್ಕಿಂತ, ರಾಮೇಶ್ವರ ನೆಲಸಿದ ಸೇತುಬಂಧಕ್ಕಿಂತ ಕವಿಗೆ
ಹೂಲಿ ಹೆಚ್ಚಿನದು, ಸಕಲಸಿದ್ಧಿಗಳ ಕೊಡುವ ತೀರ್ಥಕ್ಷೇತ್ರಗಳಿಗಿಂತ
ಸಾವಿರಪಟ್ಟು ಹೆಚ್ಚಾದ ತನ್ನ ಗುರು ಸಿದ್ಧನಂಜೇಶನ ಕ್ಷೇತ್ರವಾದ ಹೂಲಿಗೆ ಹೋಲಿಕೆ ಯಾವುದಿರಲು ಸಾಧ್ಯ ಎಂದು ಕವಿ
ಕೇಳುತ್ತಾನೆ.
ಪದ್ಯ೨:
ಮುಂದೆ ೨೬ನೇ ಪದ್ಯದಲ್ಲಿ ಕವಿ ಹೂಲಿಯ ಪ್ರಾಣಿ-ಮರ-ತರು-ಜನಗಳ ಬಗ್ಗೆ
ಹೇಳುವುದನ್ನು ನೋಡಿ:
ಆ
ಪುರದ ಹೋರಿ ನಂದಿಗಳು ಪಶು ಕಾಮದುಘ
ವಾ
ಪುರದ ಕೋಣಗಳೆಲ್ಲ ಸಿದ್ಧರಸ ಕೋಣ
ವಾ
ಪುರದ ತರುಗಳೆಲ್ಲಂ ಕಲ್ಪತರು ಶಿಲೆಗಳೆಲ್ಲ ಚಿಂತಾರತ್ನವು
ಯಾ
ಪುರದ ಸತಿಯರೆಲ್ಲಂ ರುದ್ರ ಕನೈಯರು
ಆ
ಪುರದ ಗುಲ್ಮಂಗಳೆಲ್ಲ
ಮರುಜೀವಣಿಗೆ
ಮಾ
ಪುರದ ಪುರುಷರೆಲ್ಲಂ ರುದ್ರಸಂತಾನವಾ ಪುರವ ಪೊಗಳಲಳವೆ ||೨೬||
ಆ
ಹೂಲಿ ಪುರದ ಹೋರಿಗಳು ಸಾಕ್ಷಾತ ಶಿವನ ವಾಹನ ನಂದಿ, ಅಲ್ಲಿನ ಹಸುಗಳೆಲ್ಲ ಕಾಮಧೇನುಗಳು.. ʼಸಿದ್ಧರಸʼ ಎಂದರೆ ಕೀಳು
ಲೋಹಗಳನ್ನು ಚಿನ್ನವನ್ನಾಗಿಸುತ್ತದೆ ಎಂದು ಹೇಳಲಾಗುವ ರಸ. ಹೂಲಿಯ
ಕೋಣಗಳು ಅಂತಹ ʼಸಿದ್ಧರಸʼದಂತಹವು..
ʼಚಿಂತಾರತ್ನʼ ಎಂದರೆ ಎಂದರೆ ಬೇಡಿದ್ದನ್ನು ಕೊಡುವ ದೇವಲೋಕದ
ದಿವ್ಯರತ್ನ. ಹೂಲಿಯ ಕಲ್ಲುಗಳೆಲ್ಲ ಅಂತಹ ದಿವ್ಯರತ್ನಗಳು. ಅಲ್ಲಿರುವ
ತರುಗಳೆಲ್ಲ
ಕಲ್ಪತರುಗಳು. ʼಗುಲ್ಮʼ ಎಂದರೆ
ಗಿಡ-ಪೊದೆ, ʼಮರುಜೇವಣಿʼ ಎಂದರೆ ಸಂಜೀವಿನಿ.
ಹೂಲಿಯ ಗಿಡ-ಪೊದೆಗಳೆಲ್ಲ ಸಂಜೀವಿನಿ,
ಅಲ್ಲಿಯ ಸತಿಯರು
ರುದ್ರಕನ್ಯೆಯರು, ಪುರುಷರೆಲ್ಲ
ರುದ್ರಸಂತಾನ, ಅಂತಹ ಊರನ್ನು ಹೊಗಳಲು ಸಾಧ್ಯವೇ ?
ಪದ್ಯ೩:
ಮುಂದುವರಿದು ಹೂಲಿಯ ಪರಿಸರವನ್ನು ವರ್ಣಿಸುವ ಪರಿ:
ತಂಪು
ಸೊಂಪಂ ಕಂಪನೀವ ತಾವರೆಗಳಂ
ತಂಪು
ಸೊಂಪಂ ಕಂಪನೀವ ಪೂದೋಟಗಳು
ತಂಪು
ಸೊಂಪಂ ಕಂಪನಿವ ಮಾಮರ ಪಲಸು ಮುಖ್ಯ ನಾನಾವೃಕ್ಷವು
ಇಂಪು
ತಂಪುಂ ಸೊಂಪನೀವ ಕದಳೀವನಂ
ಇಂಪು
ತಂಪುಂ ಸೊಂಪನೀವ ಪುಳಿನಸ್ಥಳಂ
ಇಂಪು
ತಂಪುಂ ಸೊಂಪ ಬೀರುವರವಟಿಗೆಗಳು ಮೆರೆದವಾ ಪುರವ ಬಳಸಿ ||೨೭||
ಆ
ಪಟ್ಟಣದ ಸುತ್ತ ತಂಪು-ಸೊಂಪು-ಕಂಪು
ಬೀರುವ ತಾವರೆಗೊಳ, ಹೂದೋಟ, ಮಾವು ಹಲಸು
ಮೊದಲಾದ ನಾನಾವೃಕ್ಷಗಳು, ಬಾಳೆವನ, ಪುಳಿನಸ್ಥಳ, ಅರವಟಿಗೆಗಳು ಮೆರೆಯುತ್ತಿದ್ದವು.
ಪುಳಿನಸ್ಥಳ ಎಂದರೆ ನದಿ-ಕೆರೆಗಳ
ದಂಡೆಯ ಉಸುಕಿನ ದಿಬ್ಬ. ಅಂತಹ ಜಾಗ ವಿವಿಧ ಸಾರ್ವಜನಿಕ ಕಾರ್ಯಕ್ರಮಗಳಿಗೆ ಉಪಯೋಗವಾಗುತ್ತಿದ್ದವು.
ಪದ್ಯ೪:
೨೮ನೇ ಪದ್ಯದಲ್ಲಿ ಹೂಲಿಯ ಕೋಟೆಯ ವರ್ಣನೆ:
ಧರೆಯ
ಪೊತ್ತಲಸಿ
ಬಂದಾ ಮಹಾಶೇಷ ತಾಂ
ಪರಿವೇಷವಾಗಿ
ಮಲಗಿರ್ದಪನೊ
ಚಕ್ರಧರ
ವರ
ಸುದರ್ಶನವನಾ
ಕ್ಷೇತ್ರದೊಳು ಮಡಗಿದನೊ ಎನಲು ಭಾಪುಂಜಮಾಗಿ
ಪುರದ ಕೋಟೆಯು ವಿರಾಜಿಸುತರ್ದುದಮರತತಿ
ಪರಿಕಿಸಲ್ಕೈತಂದ ಪುಷ್ಪಕದ ಸಾಲುಗಳೊ
ಕರಮೆಸೆವ
ತೆನೆಗಳಿಂ ಮುಗಿಲಟ್ಟಳೆಗಳ ಸಂದೋಹದಿಂ ಶೋಭೆವತ್ತು ||೨೮||
ಭೂಮಿಯನ್ನು ಹೊತ್ತು ದಣಿದ ಫಣಿರಾಯ ವೇಷಬದಲಿಸಿ ಬಂದು ಮಲಗಿದ್ದಾನೋ
ಎನ್ನುವಂತೆ, ವಿಷ್ಣು ತನ್ನ ಚಕ್ರವನ್ನು (ಪುರದ ರಕ್ಷಣೆಗೆ) ಈ ಊರಿನಲ್ಲಿ ತಂದಿಟ್ಟನೋ ಎನ್ನುವಂತಿರುವ
ಪ್ರಭಾಪುಂಜವಾದ ಪುರದಕೋಟೆ, ದೇವಗಣ
ಪರೀಕ್ಷಿಸಲು ಎಂದು ತಂದ ದೇವುಲೋಕದ ಹೂವುಗಳ ಪಂಕ್ತಿಯಂತಿರುವ ಕೋಟೆಯ ಕುಂಬಿಗಳು, ಮುಗಿಲಟ್ಟಳೆ(ಎತ್ತರದ
ಬುರುಜು)ಗಳ ಸಮೂಹದಿಂದ ಆ ಪಟ್ಟಣ ಶೋಭೆಪಡೆದುದು.
ಪದ್ಯ೫
ಹೂಲಿಯ ಊರಿನ ಬೀದಿಗಳು, ಅಂಗಡಿ, ಬಾಜಾರಗಳ ಬಗ್ಗೆ ೨೯ನೇ ಪದ್ಯದಲ್ಲಿ ಕವಿಯ
ವರ್ಣನೆ:
ಖೇಚರರು ಯೆಡೆಗೆಯ್ದು ತಮ್ಮಯ ಪಥಶ್ರಮವಿ
ಮೋಚನಂಗೆಯ್ದು ಪೋಗಲಿವೆಂದು ರಚಿಸಿರ್ದ
ಪ್ರಾಚುರದ ವೈಜಯಂತಿಗಳು ಕರಮೆಸೆದವಾ ಪುರದ
ಕೇರಿಗಳ ನಡುವೆ
ಗೋಚರಿಪ ಸೋಮ ಸೂರಿಯ ವೀಧಿ ರಾಜಿಸಲು
ರೋಚಿರ್ಮಯದ ಗಚ್ಚುಗಟ್ಟಿನಂಗಡಿಗಳತಿ
ಶೌಚಮಾಗೆಸೆಯಲಾ ಪುರದ ಬಾಜಾರದೈಶ್ವರ್ಯಮಂ
ಪೊಗಳಲಳವೆ ||೨೯||
ಯಕ್ಷ, ಗಂಧರ್ವ, ವಿದ್ಯಾಧರ ಮುಂತಾದ ಮುಗಿಲಪಯಣಿಗರು ತಮ್ಮ ಪ್ರಯಾಣದ ದಣಿವನ್ನು
ತೀರಿಸಿಕೊಂಡು ಹೋಗಲಿ ಎಂದು ರಚಿಸಿರುವ ವೈಜಯಂತಿಗಳು, ಕೇರಿಗಳ
ನಡುವೆ ರಾಜಿಸುವ ಸೋಮ
ಸೂರ್ಯ ಬೀದಿಗಳು, ಹೊಳೆವ
ಗಚ್ಚುಗಟ್ಟಿನ ಅಂಗಡಿಗಳಿಂದ ಶೋಭಿಸುವ ಈ ಪಟ್ಟಣದ ಬಾಜಾರದ ಐಶ್ವರ್ಯವನ್ನು
ಹೇಗೆ ಹೊಗಳಲಾದೀತು ?
ಪದ್ಯ೬:
ಮುಂದಿನ ಪದ್ಯದಲ್ಲಿ ಹೂಲಿಯ ಪೇಟೆಯ ರತ್ನ-ಚಿನ್ನದ ಅಂಗಡಿಗಳ ಕವಿಯ
ವರ್ಣನೆ:
ಶರಧಿಯಂ
ಮುನಿ ಮುನಿದು ಸೇವಿಸಲು ರತ್ನತತಿ
ನೆರೆ
ಬಹಿಷ್ಕರಿಸಿದೊಲು ನವರತುನ ವಿಕ್ರಯದ
ಪಿರಿಯಂಗಡಿಗಳು ವಿವಿಧಪ್ರಕಾಶಂಗಳಿ೦ ಕಾ೦ತಿವೆತ್ತೊಪ್ಪಿರ್ದುವು
ವರ
ಕುಬೇರನ ಧನದ ಬೆಳಸ ಕೈಲಂ ಮಾಳ್ಪ
ಸುರುಚಿರ
ಕೊಠಾರದೊಳೆಗೆಸೆವ
ರಾಶಿಗಳಂತೆ
ಕರಮೆಸೆವ
ಪೊನ್ನಕುಪ್ಪೆಗಳಿಂದ ಚಿನಿವರದರಂಗಡಿ ವಿರಾಜಿಸಿದುವು ||೩೦||
ಅಗಸ್ತ್ಯ ಮುನಿ ಸಾಗರವನ್ನೇ ಕುಡಿದು ಬರಿದು ಮಾಡಿದಾಗ ಅಗಾಧ
ಸಂಖ್ಯಯಲ್ಲಿ ಸಾಗರದ ತಳದಲ್ಲಿನ ರತ್ನಗಳ ಸಮೂಹ ಹ್ಯಾಗೆ ಕಾಣುತ್ತಿತ್ತೋ ಹಾಗೆ ನವರತ್ನ
ಮಾರಾಟದ ದೊಡ್ಡ ಅಂಗಡಿಗಳು ವಿವಿಧ ಬಣ್ಣದ ಬೆಳಕಿನಿಂದ ಹೊಳೆಯುತ್ತಿದ್ದವು. ಕುಬೇರನ ಧನದ ಬೆಳೆಯನ್ನು ಸುಗ್ಗಿ ಮಾಡಿ ರಾಶಿ ಹಾಕಿದಂತೆ ಹೊನ್ನ
ರಾಶಿಗಳಿರುವ ಚಿನಿವಾರದವರ ಅಂಗಡಿಗಳು ಹೂಲಿಯ ಪೇಟೆಯಲ್ಲಿ ವಿರಾಜಿಸುತ್ತಿದ್ದವು.
ಅಗಸ್ತ್ಯ ಮುನಿ ಸಾಗರವನ್ನು ಯಾಕೆ ಕುಡಿಯಬೇಖಾಯಿತು ಎನ್ನೋದಕ್ಕೆ
ಮಹಾಭಾರತದಲ್ಲಿ ಉಪಕತೆಯೊಂದಿದೆ: ದೇವತೆಗಳು ಮತ್ತು ಕಾಲಕೇಯರು ಎಂಬ ರಾಕ್ಷಸರ ನಡುವೆ ಯುದ್ಧ
ನಡೆದಿರುವಾಗ, ರಾಕ್ಷಸರು ಸಾಗರದ ತಳದಲ್ಲಿ ಅಡಗಿಕೊಂಡಿರುತ್ತಾರೆ. ದೇವತೆಗಳ ರಾಜ ಇಂದ್ರನ
ಕೋರಿಕೆಯಂತೆ ಅಗಸ್ತ್ಯ ಮುನಿಗಳು ಸಾಗರವನ್ನು ಕುಡಿದು ಬರಿದು ಮಾಡಿದಾಗ, ದೇವತೆಗಳು ರಾಕ್ಷಸರನ್ನು
ಕೊಂದು ಜಯಶೀಲರಾಗಿದ್ದರಂತೆ.
ಪದ್ಯ೭:
೩೧ನೇ ಪದ್ಯದಲ್ಲಿ ಹೂಲಿಯ ಪೇಟೆಯ ಕಸ್ತೂರಿ,ಕುಂಕುಮ, ಗಂಧವಿಡಿ ಅಂಗಡಿಗಳ ವರ್ಣನೆ:
ಭೋಗಿಗಳ
ಸೆರೆಗೆಯ್ವ ಬೆಳುವೆಮರ್ದುಗಳ
ಚೆ
ನ್ನಾಗಿ
ಬಲ್ಲೆಯೆನುತ್ತ ಗಂಧವಿಡಿಯಮಲಸೊಗ
ಸಾಗಿ
ಚಿತ್ರದ ಪೆಟ್ಟಿಗೆಗಳಲ್ಲಿ ತುಂಬಿಡಲು ಭೋಗಿಕುಲ ಪಾತಾಳಕೆ
ಪೋಗಲಾಪುರದ
ಸೊಬಗರ್ಗಿತ್ತು
ಜನವಶ್ಯ
ರಾಗಿ
ಕಸ್ತೂರಿ ಕುಂಕುಮಗಂಧವಿಡಿಗಳಂ
ರಾಗದಿಂದೀವುತಿಹ
ಗಂಧವಿಡಿಯಂಗಡಿಗಳಿದ್ದವತಿ ಚೆಲ್ವಿನಿಂದ ||೩೧||
ಭೋಗಿ ಎಂದರೆ ಸರ್ಪ. “ಸರ್ಪಗಳನ್ನು ಹಿಡಿದಿಟ್ಟುಕೊಳ್ಳುವಂತಹ ವಶೀಕರಣದ
ಮದ್ದು ಗೊತ್ತು” ಎಂದು ಗಂಧವಿಡಿಯನು ಸೊಗಸಾಗಿ ಚಿತ್ರದ ಪೆಟ್ಟಿಗೆಗಳಲ್ಲಿ
ತುಂಬಿಡಲು, ಅದಕ್ಕಂಜಿ ಸರ್ಪಕುಲ ಪಾತಾಳಲೋಕಕ್ಕೆ ಹೋಯಿತು. ಗಂಧವಿಡಿಗೆ ಮರುಳಾಗಿ ಬರುವ ಜನರಿಗೆ,
ಕಸ್ತೂರಿ-ಕುಂಕುಮ-ಗಂಧವಿಡಿಗಳನ್ನು
ಒದಗಿಸುವಂತಹ ಚಂದದ ಅಂಗಡಿಗಳು ಅಲ್ಲಿದ್ದವು.
ಪದ್ಯ೮:
ಮುಂದೆ ಜವಳಿ ಅಂಗಡಿಗಳು ಕವಿಯ ವರ್ಣನೆಯಲ್ಲಿ
ಸಕಲಭೂಷಣಗಳಂ
ಧರಿಸಿ ವಸ್ತ್ರವನುಳಿಯೆ
ಮುಕುರದೊಳು
ಮೂಗರಿದ ಮುಖವ ನೋಡಿದ ಮಾಳ್ಕೆ
ಸಕಲ
ಜನಕೆಲ್ಲ ವಸ್ತ್ರವೆ
ದಿವ್ಯಭೂಷಣಂ ವಹಮಾನ ಪೂಜ್ಯವೆಂದು
ಪ್ರಕಟಿಸುತ
ಮೃಗಹಯಗಜಾವಳಿಯ ಶುಭ್ರಗಳ
ಸಕಲರ್ಗೆ ಕೊಡುತ ಮಹದೈಶ್ವರ್ಯಕರಮಾಗಿ
ಚಕಚಕಿಸುತಿರ್ದವಾ ಜವಳಿಯಂಗಡಿಗಳತಿ ಸಿಂಗರಿಸಿ ಸೊಬಗುವೆರಸಿ ||೩೨||
ʼಚಂದದ ಆಭರಣಗಳನ್ನು ಧರಿಸಿ ಕಳಪೆ ಬಟ್ಟೆ
ತೊಡುವುದು ಎಂದರೆ, ಕನ್ನಡಿಯಲ್ಲಿ ಮೂಗಿಲ್ಲದ ಮುಖವ ಕಂಡಂತೆ, ಎಲ್ಲ ಜನರಿಗೂ ವಸ್ತ್ರವೆ ದಿವ್ಯಭೂಷಣ, ಅದೇ
ಪೂಜ್ಯʼ ಎಂದು
ಹೇಳುತ್ತ, ಮೃಗಹಯಗಜಾವಳಿಯ ಬಟ್ಟೆಗಳನ್ನು ಎಲ್ಲರಿಗೂ
ಒದಗಿಸುತ್ತ, ಜವಳಿ ಅಂಗಡಿಗಳು ಐಶ್ವರ್ಯಕರವಾಗಿ ಹೂಲಿಯಲ್ಲಿ
ಬೆಳಗುತ್ತಲಿವೆ.
ಪದ್ಯ೯:
೩೩ನೇ ಪದ್ಯದಲ್ಲಿ ಕಂಚುಗಾರರ, ಎಲೆಗಾರರ ಅಂಗಡಿಗಳ ವರ್ಣನೆ ನೋಡಿ:
ಷೋಡಶಾಂಶುಂ ಸಹಸ್ರಾಂಶುಗಳು ರಾಹುವಿನ
ದಾಡೆಗಂಜೋಡಿ
ಬಂದಿ ಮಳಿಗೆಗಳಲ್ಲಿ ಮನೆ
ಮಾಡಿಕೊಂಡಿರ್ಪವೊಲು ಕಂಚುಗಾರರ ಪಸರವರಿಸು ಸರಮಾಗೆಸೆದವು
ಮೂಡೆಗಟ್ಟಂ
ಕಟ್ಟಿ ಹುಡುಕುನೀರೊಳಗದ್ದಿ
ಕೂಡೆ
ಮೂಗಂ ಕೊಯ್ದೊಡಳ್ಕದೇ ಬೀದಿಯೊಳು
ನಾಡೆ
ನಾನಾ ಶೋಭನಕ್ಕೆ ಮುಂದೆನುತಿರ್ಪ ಯೆಲೆಯಂಗಡಿಗಳೆಸೆದವು ||೩೩||
ʼಅಂಶುʼ ಎಂದರೆ
ಕಿರಣ. ʼಸಹಸ್ರಾಂಶುʼ ಎಂದರೆ ಸಾವಿರಕಿರಣಗಳುಳ್ಳವನು – ಸೂರ್ಯ.. ʼಷೋಡಶಾಂಶುʼ ಎಂದರೆ
ಚಂದ್ರ. ಸೂರ್ಯ-ಚಂದ್ರರು ರಾಹುವಿನ ಕೋರೆಹಲ್ಲುಗಳಿಗೆ ಅಂಜಿ ಓಡಿ ಬಂದು ಅವಿತುಕೊಂಡಿರುವಂತೆ ಕಂಚುಗಾರರ ಅಂಗಡಿಯಲ್ಲಿನ ಬಾಣಗಳು ಕಾಣುತಿದ್ದವು
ಎಂದು ಮೊದಲ ಮೂರು ಸಾಲುಗಳ ಅರ್ಥ. ಇಲ್ಲಿ ಒಂದು ವಿಶೇಷತೆಯನ್ನು ಇಲ್ಲಿ ಗಮನಿಸಬಹುದು - ʼಅಂಶುʼ ಪದಕ್ಕೆ
ಇನ್ನೊಂದು ಅರ್ಥ ʼಚೂಪಾದ ಮೊನೆʼ ಎಂದೂ
ಇದೆ. ಸೂರ್ಯ-ಚಂದ್ರರಿಗೆ ಬೇರೆ ಪದಗಳಿದ್ದರೂ ಕವಿ
ಇಲ್ಲಿ ಬಾಣಗಳಿಗೆ ಉಪಮಾನವಾಗಿರೋದರಿಂದ ಸಹ’ಸ್ರಾಂಶು’ ಮತ್ತು ಷೋಡ’ಶಾಂಶು’
ಪದಗಳನ್ನು ಬಳಸಿದ್ದಾನೆ.
ಮುಂದಿನ ಅರ್ಧ
ಪದ್ಯದಲ್ಲಿ ಎಲೆ ಅಂಗಡಿಗಳ ವರ್ಣನೆಯಿದೆ- ಬಿಗಿಯಾದ ಕಟ್ಟು ಕಟ್ಟಿ, ಬಿಸಿನೀರಿನಲ್ಲಿ ಅದ್ದಿ, ʼಮೂಗುʼ ಕೊಯ್ದರೂ
ಅಳುಕದೆ (!), ಎಲೆಗಳು ನಾನಾ ಶೋಭನಕ್ಕೆ ನಾ ಮುಂದೆ ನಾ ಮುಂದೆ ಎನ್ನುತ್ತಿರುತ್ತವೆ. ಅಂತಹ ಎಲೆಗಳ ಅಂಗಡಿಗಳು ಹೂಲಿಯಲ್ಲಿ ಶೋಭಿಸುತ್ತಿರುತ್ತವೆ.
ಪದ್ಯ೧೦:
ಹೂಲಿಯ ಪೇಟೆಯಲ್ಲಿ ವಿವಿಧ ಕಸುಬಿನವರ ವರ್ಣನೆ:
ಸರವ
ತಿದ್ದಿಡುವ ಸರವಂದಿಗರ ಗಂದಿಗರ
ಪಿರಿದು
ತೈಲವ ತೆಗೆವ ಗಾಣಿಗರ ಶ್ರೇಣಿಗರ
ಇರದೆ
ದವಸವನಳೆವ ಆವಟಿಗ ಕೋವಟಿಗ ದೀವಟಿಗ ಕಲ್ಲುಕುಟಿಗ
ಹರದರಂ
ಮಚ್ಚಿಸುವ ನರ್ತಕರ ವರ್ತಕರ
ಕರಸಣ್ಣಗಳ
ನೆಯ್ವ ಜೇಡರಂ ಲಾಡರಂ
ಪರಿಮಳದ
ಪೂವಿನಾ ಮಾಲೆಗಾರರ ನೀಲಿಗಾರರಾ ಪಸರಮೆಸೆಗುಂ ||೩೪||
ಬಾಣಗಳನ್ನು ತಯಾರಿಸುವ ಸರವ೦ದಿಗರು, ಗ್ರಂಥಿಗೆ
ಅಂಗಡಿ ಇಟ್ಟುಕೊಂಡಿರುವ ಗಂದಿಗರು, ಎಣ್ಣೆ ತೆಗೆಯುವ ಗಾಣಿಗರು, ಶ್ರೇಣಿಗರು ಅಂದರೆ ಶೆಟ್ಟರು, ಕಾಳು
ಅಳೆಯುವ ಕಸುಬಿನ ಅವಟಿಗರು, ಕೊಮಟ-ಶೆಟ್ಟಿಗಳು, ದೀವಟಿಗೆ ಹಿಡಿಯುವವರು,ಕಲ್ಲು ಕುಟಿಗರು, ನರ್ತಕರು-ವರ್ತಕರು, ನೇಕಾರರು- ಲಾಡರು, ಸುಗಂಧದ ಮಾಲೆ ಕಟ್ಟುವ
ಮಾಲೆಗಾರರು, ಬಟ್ಟೆಗೆ ಬಣ್ಣ
ಹಾಕುವ ನೀಲಿಗಾರರು ಇವರ ಪಸರ – ಅಂದರೆ ಅಂಗಡಿ-ವ್ಯಾಪಾರ-ವೆಲ್ಲ
ಹೂಲಿಯ ಪೇಟೆಯಲ್ಲಿ ಶೋಭಿಸುತ್ತಿವೆ.
ಪದ್ಯ೧೧:
ಹೂಲಿಯ ರಾಜಬೀದಿಯ ವರ್ಣನೆ:
ತುರಗಗಜರಥಗಳಿಂ
ರಾಜಪುತ್ರರುಗಳಿಂ
ದೊರೆರಾಹುತರುಗಳಿಂ
ಸೇನಾಧಿಪತಿಗಳಿಂ
ಗುರಿಕಾರರಿಂ
ನಾಯಕ ಪ್ರತತಿಯಿಂದ ಸಾವಂತರಿಂ ಬಂಟರಿಂದ
ಕರಣಿಕಸಮೂಹದಿಂ
ದೇಶಮುಖ್ಯರುಗಳಿಂ
ಪರಿಪರಿಯ
ಊಳಿಗದ ನಡತೆಕಾರರುಗಳಿಂ
ಪುರರಕ್ಷಕರ
ಮಣಿಹಗಾರರೆಡೆಯಾಟದಿಂದೊಪ್ಪಿತಾ ರಾಜವೀಧಿ ||೩೫||
ಕುದುರೆ-ಆನೆ-ರಥಗಳು, ರಾಜಪುತ್ರರು, ದೊರೆರಾಹುತರು, ಸೇನಾಧಿಪತಿಗಳು, ಗುರಿಕಾರ, ನಾಯಕರು, ಸಾವಂತರು, ಬಂಟರು, ಕರಣಿಕರು, ದೇಶಮುಖ್ಯರು, ಪರಿಪರಿಯ
ಊಳಿಗದವರು, ನಡತೆಕಾರರು, ಪುರರಕ್ಷಕರು, ಪಾರುಪತ್ಯಗಾರರು ಇವರ ಓಡಾಟದಿಂದ ಹೂಲಿಯ ರಾಜಬೀದಿ ರಾಜಿಸುತ್ತಿತ್ತು.
ಪದ್ಯ೧೨:
ಗುರುಪಾದಸೇವನಾರತಿಗಳುಂ
ವ್ರತಿಗಳುಂ
ವರಲಿಂಗಪೂಜಾದುರಂಧರರು
ಸೌಂದರರು
ಚರಲಿಂಗದಾಸೋಹಯುಕ್ತರುಂ
ಭಕ್ತರುಂ ಪರಮಪಾವನಮುಕ್ತರು
ನಿರುತ
ಭಾಷಾಚಾರಸತ್ಯರುಂ ನಿತ್ಯರುಂ
ಪರಧನ
ಪರಸ್ತ್ರೀಯ ರಹಿತರುಂ ಸುಹಿತರುಂ
ಹರಸಮಯಸ್ಥಾಪನಾಚಾರ್ಯರುಂ
ಧೈರ್ಯರುಂ ಶೋಭಿಸಿದರಾ ಪುರದೊಳು ||೩೬||
ಗುರುಭಕ್ತರು, ಲಿಂಗಪೂಜೆಯ ದುರಂಧರರು,
ಜಂಗಮದಾಸೋಹಿಗಳು, ನುಡಿತಪ್ಪದ
ಸತ್ಯರು, ನಿತ್ಯರು, ಪರಧನ-ಪರಸ್ತ್ರೀಯಿಂದ ದೂರವಿರುವ ಸುಹಿತರು, ಶಿವಸಮಯ
ಸ್ಥಾಪನಾಚಾರ್ಯರು, ಧೈರ್ಯವಂತರು ಆ ಹೂಲಿಯ ಪುರದೊಳು ಶೋಭಿಸುತ್ತಿದ್ದರು.
ಪದ್ಯ೧೩:
ತಾನು ಭಾಗವಾಗಿದ್ದ ಹೂಲಿಯ ವೀರಶೈವ ಧಾರ್ಮಿಕ ಪರಿಸರವನ್ನು ಕವಿ
ವರ್ಣಿಸುವ ಪರಿ:
ವೀರಶೈವಾಚಾರಸಂಪನ್ನರಿಂ
ವಿಪುಳ
ವೀರಮಾಹೇಶ್ವರರ
ಸಂದೋಹದಿಂ ಪರಮ
ವೀರವ್ರತಾಚಾರನಿಷ್ಠರಿಂ
ದುಷ್ಟನಿಗ್ರಹ ಶಿಷ್ಟ ಪರಿಪಾಲರಿಂ
ಮಾರರಿಪುಶಾಸ್ತ್ರ
ಪೌರಾಣಕಾವ್ಯಂಗಳಂ
ಚಾರು
ಸದ್ಭಕ್ತಿಯಿಂ ಕೇಳಿಯುತ್ಸಹಗೆಯ್ವ
ವೀರಭಕ್ತಪ್ರತತಿಯಿಂದೊಪ್ಪಿತಾ
ಶಿವನ ಕೊರಳ ಪೂಮಾಲೆ ಹೂಲಿ ||೩೭||
ವೀರಶೈವಾಚಾರಸಂಪನ್ನರು, ವೀರಮಾಹೇಶ್ವರರು, ವೀರವ್ರತಾಚಾರನಿಷ್ಠರು, ಶೈವ ಶಾಸ್ತ್ರ ಪೌರಾಣ ಕಾವ್ಯಗಳನ್ನು ಸದ್ಭಕ್ತಿಯಿಂದ ಕೇಳಿ,
ಉತ್ಸಹಗೊಳ್ಳುವ
ವೀರಭಕ್ತ ಸಂತತಿಯಿಂದ ಶೋಭಿಸುವ ಆ ಹೂಲಿ ಶಿವನ ಕೊರಳ ಹೂಮಾಲೆಯಂತಿದೆ.
ಉಪಸಂಹಾರ
ಈ ಪದ್ಯಗಳು ೧೭ನೇ
ಶತಮಾನದಲ್ಲಿ ಹೂಲಿ ಭವ್ಯವಾಗಿ ಮೆರೆದಿತ್ತು ಎಂದು ತೋರಿಸಿಕೊಡುತ್ತವೆ. ಕಾವ್ಯಕ್ಕೆ ಸಹಜವಾದ
ಉತ್ಪ್ರೇಕ್ಷೆ ಒಂಚೂರು ಇದ್ದಿರಬಹುದಾದರೂ, ಶಾಸನಗಳು, ಇತರ ಐತಿಹಾಸಿಕ ದಾಖಲೆಗಳು ಕೂಡ ಕವಿಯು
ವರ್ಣಿಸಿದ ಹೂಲಿಯ ಹಿರಿಮೆಗೆ ಸಾಕ್ಷಿ ಒದಗಿಸುತ್ತವೆ ಎಂದುದನ್ನು ಗಮನಿಸಿದರೆ, ಉತ್ಪ್ರೇಕ್ಷೆ
ಬಹಳಿಲ್ಲವೆನಿಸುತ್ತದೆ.
ಈ ಬರಹದಲ್ಲಿ ಗುರುರಾಜ ಚಾರಿತ್ರದ ಹದಿಮೂರೇ ಪದ್ಯಗಳ ಅರ್ಥವಿಶ್ಲೇಷಣೆ ಮಾಡಲಾಗಿದೆ. ಆ ಕಾವ್ಯದಲ್ಲಿ ಹೂಲಿಯ ಬಗೆಗೆ ಇನ್ನೂ
ಹಲವು ಉಲ್ಲೇಖಗಳಿವೆ. ಓದುಗರಿಗೆ ಮೂಲ ಕಾವ್ಯವನ್ನು ಓದಲು ಆಸಕ್ತಿ ಬಂದರೆ ಅದೇ ಈ ಬರಹಕ್ಕೆ ಸಲ್ಲುವ
ಗೌರವ.
===================================================
ಆಭಾರ ಮನ್ನಣೆ:
ಗುರುರಾಜ ಚಾರಿತ್ರದ ಪದ್ಯಗಳನ್ನು ಅರ್ಥೈಸಿಕೊಳ್ಳಲು ಮಾರ್ಗದರ್ಶನ
ಮಾಡಿದ ನಾಡಿನ ಖ್ಯಾತ ವಿದ್ವಾಂಸರಾದ ಡಾ. ಕೆ.ಆರ್.ಗಣೇಶ ಮತ್ತು ಶ್ರೀ. ಗುರುಪ್ರಸಾದ
ಅವರಿಗೆ ಬರಹಗಾರ ಆಭಾರಿಯಾಗಿದ್ದಾನೆ.
ಆಧಾರ:
·
ಶ್ರೀ
ಸಿದ್ಧನಂಜೇಶ ವಿರಚಿತ ಶ್ರೀ ಗುರುರಾಜ ಚಾರಿತ್ರ – ಸಂ: ಪ್ರೋ. ಸಂ.ಶಿ.ಭೂಸನೂರಮಠ (೧೯೫೦)
ಕಠಿಣ ಪದಗಳ ಅರ್ಥ
ಗುಲ್ಮ =
ಗಿಡ,ಪೊದೆ,
ಮರುಜೇವಣಿ = ಸಂಜೀವಿನಿ.
ಸಂದೋಹ = ಗುಂಪು
ಕರಮೆ
= ಹೆಚ್ಚಾಗಿ
ವಿಶೇಷವಾಗಿ, ಕರಮೆಸೆವ = ವಿಶೇಷವಾಗಿ ಶೋಭಿಸುವ
ಅಮರತತಿ
= ದೇವಗಣ
ಅಟ್ಟಳೆ
=
ಕೋಟೆಯ ಬುರುಜು, ಮುಗಿಲಟ್ಟಳೆ = ಆಗಸದಷ್ಟು
ಎತ್ತರವಾದ ಅಟ್ಟಳೆ
ಖೇಚರ
=
ಗಂಧರ್ವ, ವಿದ್ಯಾಧರ
ಮೊದಲಾದ ಆಕಾಶಸಂಚಾರಿಗ
ವೈಜಯಂತಿ
= ಧ್ವಜ, ಬಾವುಟ
ರೋಚಿರ್ಮಯ
=
ಕಾಂತಿಯುತ
ಬೆಳುವೆ = ಮಾಟ, ವಶೀಕರಣ,
ಬೆಳುವೆಮರ್ದು
= ವಶೀಕರಣ ಮಾಡುವಂತ ಮದ್ದು
ರತ್ನತತಿ= ರತ್ನಗಳ ಸಮೂಹ
ಬೆಳಸು =
ಫಸಲು, ಬೆಳೆ
ಸುರುಚಿರ= ಬಹಳ
ಸುಂದರವಾದ, ಕಾಂತಿಯುಳ್ಳ
ಕುಪ್ಪೆ= ರಾಶಿ
ವಹಮಾನ
= ನಡತೆ,
ಚಾರಿತ್ರ್ಯ
ಗಜಾವಳಿ = ಒಂದು ರೀತಿಯ ರೇಶ್ಮೆಯ ಬಟ್ಟೆ.
ಆನೆಗಳ ಸಾಲುಗಳನ್ನು ಮೂಡಿಸಿದ ಬಟ್ಟೆ ? ಮೃಗಹಯಗಜಾವಳಿ = ಜಿಂಕೆ-ಕುದುರೆ-ಆನೆಗಳ ಸಾಲುಗಳನ್ನು ಮೂಡಿಸಿದ ರೇಶ್ಮೆ ಬಟ್ಟೆ ?
ಸಹಸ್ರಾಂಶು= ಸೂರ್ಯ
ಷೋಡಶಾಂಶು = ಚಂದ್ರ
ದಾಡೆ
= ಕೋರೆಹಲ್ಲು
ಪಸರ
=
ಅಂಗಡಿ; ಸರಕು,
ಸರ = ಶರ, ಬಾಣ
ಮೂಡೆಗಟ್ಟು = ಮೂಟೆಕಟ್ಟು, ಒಂದು ರೀತಿಯ ಗಂಟು.
ಹುಡುಕುನೀರು= ಕುದಿನೀರು
ಎಸೆ = ಶೋಭಿಸು
ಸರವಂದಿಗ
=
ಬಾಣಗಳನ್ನು ಕಟ್ಟುವವನು
ಹರದ =ವ್ಯಾಪಾರಿ
ಕರಸಣ್ಣ = ಒಂದು
ರೀತಿಯ ಬಟ್ಟೆ. ಯಾವ ರೀತಿಯದು??
ಆವಟಿಗ= ದವಸಧಾನ್ಯವನ್ನು ಅಳೆಯುವ ಕಸುಬಿನವನು
ಮಣಿಹಗಾರ= ದೇವಸ್ಥಾನ,
ಅರಮನೆ, ಸುಂಕದ ಕಟ್ಟೆ ಮುಂತಾದುವುಗಳ ಉಸ್ತುವಾರಿ
ನೋಡಿಕೊಳ್ಳುವ ಅಧಿಕಾರಿ,ಮೇಲ್ವಿಚಾರಕ, -ಪಾರುಪತ್ಯಗಾರ