(ಆಕೃತಿ ಕನ್ನಡ ಜಾಲಪತ್ರಿಕೆಯಲ್ಲಿ ಪ್ರಕಟಿತ ಬರಹ: “ಹರನ ಕೊರಳ ಹೂಮಾಲೆ”- ಹೂಲಿ (ಭಾಗ – ೩) )
ʼಹೂಲಿʼ ಪದಕ್ಕೆ
ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ನಿಘಂಟಿನಲ್ಲಿ ಮೂರು ಅರ್ಥ ಕೊಟ್ಟಿದ್ದಾರೆ - ೧. ಹೊಡೆದಾಟ. ೨. ಗಲಾಟೆ. ಕದನ;ಗದ್ದಲ ೩. ಒಂದು ಬಗೆಯ
ಗಿಡ.
ಹೂಲಿಗೆ “ಹೂಲಿ” ಎಂದು
ಹೆಸರು ಬಂದಿದ್ದು ಹ್ಯಾಗೆ ? ನಿಘಂಟಿನಲ್ಲಿ ಕೊಟ್ಟಿರುವ ಅರ್ಥಗಳಲ್ಲಿ ಯಾವುದಾದರೂ ʼಹೂಲಿʼಯ
ಹೆಸರಿನ ಒಗಟು ಬಿಡಿಸಲು ಸಹಾಯಕವೇ? ಈ ಊರಿನವರು ಹೊಡೆದಾಟ,ಗಲಾಟೆಗಾಗಿ ಹೆಸರಾಗಿ, ಅದರಿಂದಾಗಿ ಊರಿಗೆ
ಆ ಹೆಸರು ಬಂತಾ ? ಅಥವಾ ಇದು ಒಂದು ಬಗೆಯ ಗಿಡದಿಂದಾಗಿ ಬಂದಿರುವ ಸಸ್ಯವಾಚಿ ಊರಹೆಸರೇ ? ಜನಪ್ರಿಯ
ನಂಬಿಕೆಯಾಗಿರುವ “ಪೂವಲ್ಲಿಯೇ ಹೂಲಿಯ ಮೂಲ ಹೆಸರು” ಎಂಬುದು “ಬೆಂದಕಾಳೂರಿನಿಂದ ಬೆಂಗಳೂರು ಆಯಿತು”
ಎನ್ನುವಷ್ಟೇ ರಮ್ಯ ಕಲ್ಪನೆಯೇ ?
ಹಲವಾರು ಶತಮಾನಗಳಿಂದ
ಬಳಕೆಯಲ್ಲಿರುವ ಹೆಸರಿನ ಮೂಲ ʼಇದಮಿತ್ತಂʼ ಎಂದು ಹೇಳುವುದು
ಅಸಾಧ್ಯ. ಆದರೆ ಲಭ್ಯವಿರುವ ಆಧಾರಗಳನ್ನು ಗಮನಿಸಿ ʼಹೀಗಿರಬಹುದುʼ ಎಂದು ತಕ್ಕಮಟ್ಟಿನ
ಊಹೆ ಮಾಡಬಹುದು. ಈ ಬರಹದಲ್ಲಿಯೂ ಅದನ್ನೇ ಮಾಡೋಣ.
ಶಾಸನಗಳಲ್ಲಿ ಹೂಲಿಯ
ಉಲ್ಲೇಖ:
ಸಾವಿರಕ್ಕಿಂತಲೂ ಹೆಚ್ಚು
ವರ್ಷಗಳ ಇತಿಹಾಸ ಹೊಂದಿರುವ ಹೂಲಿಯು ಹಲವಾರು ಶಾಸನಗಳಲ್ಲಿ ಉಲ್ಲೇಖಗೊಂಡಿದೆ.
ಶಾಸನಗಳು ಹೂಲಿಯ ಮಹಾಜನರನ್ನು
ಅಗಣ್ಯ-ಪುಣ್ಯನಿಲಯರು, ಲೋಕೈಕಪೂಜ್ಯರು, ಕಲಾನಿಪುಣರು
ಇತ್ಯಾದಿಯಾಗಿ ಹೊಗಳಿವೆ. ಹೀಗಾಗಿ
ಹೊಡೆದಾಟ,ಗಲಾಟೆಗಳ ಕಾರಣದಿಂದಾಗಿ ಈ ಊರಿಗೆ ಹೆಸರು ಬಂದಿತು ಎನ್ನುವದನ್ನು ಅನುಮಾನಾತೀತವಾಗಿ
ತಲೆಯಿಂದ ತೆಗೆದುಹಾಕಬಹುದು.
ಹೂಲಿಯಲ್ಲಿ ಈಗಲೂ ೨೦ಕ್ಕಿಂತ
ಹೆಚ್ಚು ಶಾಸನಗಳಿವೆ. ಅವುಗಳಲ್ಲಿ ಊರ ಹೆಸರನ್ನು ಹೇಗೆ ಉಲ್ಲೇಖಿಸಿವೆ ಎಂಬುದನ್ನು ಕೆಳಗಿನ ಕೋಷ್ಟಕದಲ್ಲಿ
ನೋಡೋಣ:
ಇಸ್ವಿ(ಕ್ರಿ.ಶ) |
ಉಲ್ಲೇಖಿತ ಹೆಸರು |
ಶಾಸನ ಮತ್ತು ಸಂದರ್ಭ |
ಆಧಾರ |
೯೮೫ |
ಪೂಲಿ |
ಇಮ್ಮಡಿ ತೈಲಪನ ಆಳ್ವಿಕೆಯಲ್ಲಿ ಪೆರ್ಗಡೆ ದದ್ದಪ್ಪಯ್ಯನು
ಪೂಲಿಯ ಹೊಲದಿಂದ ಬಂಡಿ ಮತ್ತು ಎತ್ತುಗಳನ್ನು ಕದ್ದು ಒಯ್ಯುವಾಗ ಅದರ ವಿರುದ್ಧ ಕೆಂದರ ಕೇತ,
ಎರವಟ್ಟ, ತೆಂಬದ ಕೇತ ಎಂಬ ಮೂವರು ಹೋರಾಡಿ ತೀರಿಕೊಂಡರು. ಅವರ ನೆನಪಿಗೆ ನಿಲ್ಲಿಸಿದ ಈ ವೀರಗಲ್ಲು
ಈಗ ಹೂಲಿಯ ಪಂಚಲಿಂಗಪ್ಪನ ಗುಡಿಯಲ್ಲಿನ ಸಂಗ್ರಹಾಲಯದಲ್ಲಿದೆ. |
ಇ.ಐ-೧೮[i], ಶಾಸನ ಸಂ: ೨೨/ಎ |
೧೦೪೩ |
ಶ್ರೀಮನ್ ಮಹಾಗ್ರಹಾರ ಪೂಲಿ |
ಲಚ್ಚಿಯಬ್ಬರಸಿ ಶ್ರೀಮನ್ ಮಹಾಗ್ರಹಾರ ಪೂಲಿಯೂರೊಡೆಯ
ಮಹಾಜನಂಗಳಿಂದ ಭೂಮಿಯನ್ನು ಕೊಂಡು, ಬಸದಿಯನ್ನು ಕಟ್ಟಿ ಅದಕ್ಕಾಗಿ ಉಂಬಳಿ ಬಿಟ್ಟಳು. ಈ ದಾನ ಶಾಸನ
ಹೂಲಿಯ ವೀರಭದ್ರ ದೇವರ ಗುಡಿಯಲ್ಲಿದೆ. |
ಇ.ಐ-೧೮, ಶಾಸನ ಸಂ: ೨೨/ಬಿ |
೧೦೮೨ |
ಶ್ರೀಮದ್ ಮಹಾಗ್ರಹಾರ ಪೂಲಿ |
ಶ್ರೀಮದ್ ಮಹಾಗ್ರಹಾರ ಪೂಲಿಯ ರವಿಕಿಮಯ್ಯ ನಾಯಕನು ಶ್ರೀ ನಾರಾಯಣ ದೇವರಿಗಾಗಿ
ಭೂದಾನ ಮಾಡಿದ್ದನ್ನು ಈ ದಾನ ಶಾಸನ ದಾಖಲಿಸುತ್ತದೆ. ಈ ದಾನ ಶಾಸನ ಹೂಲಿಯ ವೀರಭದ್ರ ದೇವರ ಗುಡಿಯಲ್ಲಿದೆ. |
ಇ.ಐ-೧೮, ಶಾಸನ ಸಂ: ೨೨/ಸಿ |
೧೦೯೭ |
ಶ್ರೀಮನ್ ಮಹಾಗ್ರಹಾರ ಪೂಲಿ |
ಶ್ರೀಮನ್ ಮಹಾಗ್ರಹಾರ ಪೂಲಿಯೂರೊಡೆಯರ ಸನ್ನಿಧಾನದಲ್ಲಿ ನಾಕಿಮಯ್ಯನು ತಾನು
ಮಾಡಿಸಿದ ಹರಿಹರ ದೇವರಿಗೆ ಭೂದಾನ ಮಾಡಿದ್ದನ್ನು ಈ ದಾನ ಶಾಸನ ದಾಖಲಿಸುತ್ತದೆ. ಈ ದಾನ ಶಾಸನವೂ
ಕೂಡ ಹೂಲಿಯ ವೀರಭದ್ರ ದೇವರ ಗುಡಿಯಲ್ಲಿದೆ. |
ಇ.ಐ-೧೮, ಶಾಸನ ಸಂ: ೨೨/ಡಿ |
೧೧೦೪ |
ಪೂಲಿ |
ಪೆರ್ಗಡೆ ಸಿಂಗರಸನು ಪೂಲಿಯಲ್ಲಿ
ವಸೂಲಾಗುವ ದಂಡ-ದೋಷಗಳಲ್ಲಿ ಒಂದು ಭಾಗವನ್ನು ಅಂಧಾಸುರ ದೇವರಿಗೆ ಸಲ್ಲಿಸಲು ಮಾಡಿದ ಆಜ್ಞೆ ಈ ಶಾಸನದಲ್ಲಿದೆ.
ಹೂಲಿಯನ್ನು ಈ ಶಾಸನದ ಒಂದು ಪದ್ಯದಲ್ಲಿ ಹೀಗೆ ವರ್ಣಿಸಲಾಗಿದೆ: ವಿಳಾಸವತೀ
ಮುಖದಂತೆ ತೋರ್ಪ ಚೆಲ್ವಿನ ಕಣಿ ಬೆಳ್ವಲಕ್ಕೆ ತಿಲಕಾಕೃತಿಯಿಂದೆಸೆದಿರ್ಪ ಪೂಲಿ. ಅಂಧಕೇಶ್ವರ ಗುಡಿಯ ಹತ್ತಿರವಿದ್ದ ಈ ಬರಹದ ಕಲ್ಲನ್ನು
ಈಗ ಪಂಚಲಿಂಗಪ್ಪನ ಗುಡಿಯಲ್ಲಿನ ಸಂಗ್ರಹಾಲಯದಲ್ಲಿ ಇಡಲಾಗಿದೆ. |
ಇ.ಐ-೧೮, ಶಾಸನ ಸಂ: ೨೨/ಇ |
೧೧೦೭ |
ಶ್ರೀಮನ್ ಮಹಾಗ್ರಹಾರ ಪೂಲಿ |
ಈಗ ಹೂಲಿಯ ಒಂದು ಭಾಗವಾಗಿರುವ
ಕಳಸವಳ್ಳಗೇರಿಯ ಮಹಾಜನರು, ಶ್ರೀಮನ್
ಮಹಾಗ್ರಹಾರ ಪೂಲಿಯೂರೊಡೆಯರ
ಸನ್ನಿಧಾನದಲ್ಲಿ ಕಳಸೇಶ್ವರ ದೇವರಿಗೆ (ಈಗಿನ ಕೆರೆಸಿದ್ದಪ್ಪನ ಗುಡಿ) ಭೂದಾನ ಮಾಡಿದ್ದನ್ನು ಈ ದಾನ
ಶಾಸನ ದಾಖಲಿಸುತ್ತದೆ. ಈ ಶಾಸನ ಕೆರೆಸಿದ್ದಪ್ಪನ ಗುಡಿಯಲ್ಲಿದೆ. |
ಇ.ಐ-೧೮, ಶಾಸನ ಸಂ: ೨೨/ಎಫ್ |
೧೧೦೭ |
ಪೂಲಿ |
ತೊರಪರ ಬೂತಯ್ಯ ಎನ್ನುವವನು
ತನ್ನ ಜನರೊಂದಿಗೆ ಪೂಲಿಯ ದನಗಳನ್ನು ಕದ್ದೊಯ್ಯುವಾಗ ತಳಾರ ನಾಯಕ, ಗಂಗರ ಬೋಸಿ ಮತ್ತು ಪೆರುವ
ಮಲ್ಲಿ ಎನ್ನುವವರು ಅವರ ವಿರುದ್ಧ ಹೋರಾಡಿ ಮಡಿದರು. ಅವರ ಸ್ಮರಣೆಗೆ ನಿಲ್ಲಿಸಿದ ಈ ವೀರಗಲ್ಲು ಈಗ
ಪಂಚಲಿಂಗಪ್ಪನ ಗುಡಿಯಲ್ಲಿನ ಸಂಗ್ರಹಾಲಯದಲ್ಲಿದೆ. |
ಇ.ಐ-೧೮, ಶಾಸನ ಸಂ: ೨೨/ಜಿ |
೧೧೬೨ |
ಪೂಲಿ |
ಶ್ರೀಮನ್ ಮಹಾಗ್ರಹಾರ ಪೂಲಿಯೂರೊಡೆಯರ ಕಾಲು ತೊಳೆದು ಪೆರ್ಗಡೆ ದಾಸಿರಾಜನು
ತಾನು ಜೀರ್ಣೋದ್ಧಾರ ಮಾಡಿಸಿದ ಶ್ರೀ ಕೇಶವ ದೇವಾಲಯಕ್ಕೆ ಭೂದಾನ ಮಾಡಿದ್ದನ್ನು ಈ ದಾನ ಶಾಸನ ದಾಖಲಿಸುತ್ತದೆ. ವಿರಕ್ತಮಠದ ಹತ್ತಿರವಿದ್ದ ಈ ಶಾಸನ ಈಗ ಪಂಚಲಿಂಗಪ್ಪನ ಗುಡಿಯಲ್ಲಿನ ಸಂಗ್ರಹಾಲಯದಲ್ಲಿದೆ. |
ಇ.ಐ-೧೮, ಶಾಸನ ಸಂ: ೨೨/ಎಲ್ |
೧೨ ನೇ ಶತಮಾನ |
ಪೂಲಿ |
ಪಂಚಲಿಂಗೇಶ್ವರ ಗುಡಿಯ ಸಭಾಮಂಟಪದ ಕಂಬದ ಮೇಲಿರುವ
ಈ ಶಾಸನದಲ್ಲಿ ಕಾಳಾಮುಖ ಗುರುಗಳಾದ ಶ್ರೀ ಜ್ಞಾನಶಕ್ತಿಯ ಶಿಷ್ಯ ನಾಗರಾಶಿಯು ಆ ಕಂಬವನ್ನು ಮಾಡಿಸಿಕೊಟ್ಟದ್ದನ್ನು ದಾಖಲಿಸುತ್ತದೆ. ಈ ಶಾಸನದಲ್ಲಿ ಪೂಲಿಯನ್ನು ದಕ್ಷಿಣದ ವಾರಣಾಸಿ ಎನ್ನಲಾಗಿದೆ. |
ಇ.ಐ-೧೮, ಶಾಸನ ಸಂ: ೨೨/ಐ |
೧೧೧೭ |
ಹೂಲಿ |
ಶ್ರೀಮನ್ಮಹಾಸ್ಥಾನಂ ಹೂಲಿಯೂರೊಡೆಯ ಮಹಾಜನಂಗಳ
ಸನ್ನಿಧಿಯಲ್ಲಿ ತ್ರಿಕೂಟೇಶ್ವರ ದೇವರಿಗೆ ದಂಡನಾಯಕ ಗೊಲ್ಲರ ಲೋಕಣನು ದಾನ ಕೊಟ್ಟುದದನ್ನು ದಾಖಲಿಸುವ
ಈ ಕಲ್ಬರಹ ಈಗ ಪಂಚಲಿಂಗೇಶ್ವರ ಗುಡಿಯ ಸಂಗ್ರಹಾಲಯದಲ್ಲಿದೆ. ಹೂಲಿಯನ್ನು ʼಹೂಲಿʼಯಂದೇ
ಕರೆದ (ಬಹುಶಃ) ಅತ್ಯಂತ ಹಳೆಯ ಬರಹ ಇದು. |
ಬೆ.ಜಿ.ಇ.ಮ.ಪು ಪುಟ[ii]:೧೭೦ |
ಹೂಲಿಯವಲ್ಲದೇ ಸವದತ್ತಿಯ
ಎರಡು ಶಾಸನಗಳು ಹೂಲಿಯ ಉಲ್ಲೇಖ ಹೊಂದಿವೆ. ಅವುಗಳನ್ನು ಮುಂದಿನ ಕೋಷ್ಟಕದಲ್ಲಿ ನೋಡೋಣ:
ಇಸ್ವಿ(ಕ್ರಿ.ಶ) |
ಉಲ್ಲೇಖಿತ ಹೆಸರು |
ಶಾಸನ ಮತ್ತು ಸಂದರ್ಭ |
ಆಧಾರ |
೧೦೪೮ |
ಮದಾಗ್ರಹಾರ
ಪೂಲಿ |
ಅಂಕರಸನು ಅಂಕೇಶ್ವರ ದೇವರ ಅಂಗಭೋಗ, ಜೀರ್ಣೋದ್ಧಾರ,ತಪಸ್ವಿಗಳ
ಆಹಾರ ಮತ್ತು ವಿದ್ಯಾಛತ್ರಕ್ಕೆಂದು ಮದಾಗ್ರಹಾರ ಪೂಲಿಯ ಅರಸರ ಮಠದ ಸೋಮೇಶ್ವರ ದೇವರ ಪಂಡಿತ
ದೇವರ ಸನ್ನಿಧಿಯಲ್ಲಿ ಭೂಮಿಯನ್ನು, ಹೂದೋಟವನ್ನು ದಾನ ಮಾಡಿದ್ದನ್ನು, ಸವದತ್ತಿಯ ಅಂಕೇಶ್ವರ ಗುಡಿಯ
ಗೋಡೆಯಲ್ಲಿರುವ ಈ ದಾನಶಾಸನ ದಾಖಲಿಸುತ್ತದೆ. |
ಕೆ.ಐ-೫[iii], ಶಾ.ಸಂ:೫೨ |
೧೨೨೮ |
ಹೂಲಿ |
ಸವದತ್ತಿಯ ಹೊರವಲಯದಲ್ಲಿದ್ದ ಮಲ್ಲಿನಾಥದೇವರಿಗೆ
ಹೂಲಿಯ ಮಾಣಿಕ್ಯತೀರ್ಥ ಬಸದಿಯ ಆಚಾರ್ಯ ಪ್ರಭಾಚಂದ್ರ ಸಿದ್ಧಾಂತಿ ದೇವರು, ಶುಭಚಂದ್ರ ಸಿದ್ಧಾಂತಿ
ದೇವರು, ಇಂದ್ರಕೀರ್ತಿ ದೇವರು, ಶ್ರೀಧರದೇವರು ತಮ್ಮ ಸಮುದಾಯದೊಂದಿಗೆ ಹೂಲಿಯ ಗಾವುಂಡನೊಡಗೋಡಿ ಭೂಮಿ
ದಾನ ಮಾಡಿದ್ದನ್ನು ಈ ಸವದತ್ತಿಯ ಶಾಸನ ಹೇಳುತ್ತದೆ. ಈಗಿನ ಪಂಚಲಿಂಗೇಶ್ವರ ಗುಡಿಯೇ ಆಗ ಮಾಣಿಕ್ಯತೀರ್ಥ
ಬಸದಿಯಾಗಿತ್ತು. ಈ ಶಾಸನ ಈಗ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ
ಕನ್ನಡ ಸಂಶೋಧನಾ ಸಂಸ್ಥೆಯಲ್ಲಿದೆ. |
ಕೆ.ಐ-೬[iv], ಶಾ.ಸಂ:೭೩ |
ಕನ್ನಡದ ಬಹಳ ಪದಗಳಲ್ಲಿನ
ʼಪʼಕಾರ ʼಹʼಕಾರಕ್ಕೆ
ಬದಲಾವಣೆ ಹೊಂದಿದ್ದನ್ನು ಹತ್ತನೇ ಶತಮಾನದಿಂದ ಈಚೆಗೆ ಎಂದು ಹೇಳಲಾಗುತ್ತದೆ. ಕ್ರಿಶ ೧೧೧೭ರ ಹೂಲಿ
ಶಾಸನದಲ್ಲಿ ಮೊದಲ ಬಾರಿಗೆ ಬರಹದಲ್ಲಿ ಕಾಣುವ ʼಹೂಲಿʼ, ನಂತರದ
ಹಲವು ಬರಹಗಳಲ್ಲಿ ಕೂಡ ʼಪೂಲಿʼಯಾಗಿಯೇ
ಕಂಡು, ಮುಂದೆ ʼಹʼಕಾರವೇ ಸ್ಥಿರವಾಗಿದೆ. ಈ ಅಸಹಜತೆಯನ್ನು ನಾವು ಹೀಗೆ
ವಿವರಿಸಬಹುದು : ಮಾತಿನಲ್ಲಿ ಮೊದಲು ಕೆಲ ಪದಗಳ ʼಪʼಕಾರ ಬದಲಾಗಿದ್ದರೂ ಬರಹದಲ್ಲಿ ಒಂದಿಷ್ಟು ದಿನ ಮುಂದುವರಿದು,
ಕೆಲ ಕಾಲ ʼಪʼಕಾರ-ʼಹʼಕಾರಗಳು
ಎರಡೂ ಬಳಕೆಯಲ್ಲಿದ್ದು, ಕೊನೆಗೆ ʼಹʼಕಾರವೇ ಸ್ಥಿರವಾಗಿದೆ. ಹೀಗಾಗಿ ಸ್ಥಿತ್ಯಂತರ ಕಾಲದ
ಶಾಸನಗಳಲ್ಲಿ ʼಪೂಲಿʼ ಮತ್ತು
ʼಹೂಲಿʼ ಎರಡೂ ಇದ್ದು,
ಆಧುನಿಕ ಕಾಲದಲ್ಲಿ ʼಹೂಲಿʼ ಉಳಿದುಕೊಂಡಿದೆ.
ಈವರೆಗೆ ನಾವು ಗಮನಿಸಿದ
ಎಲ್ಲ ಶಾಸನಗಳು ಹೂಲಿಯನ್ನು ʼಪೂಲಿʼ ಎಂದೋ,
ಇಲ್ಲವೇ ಅದರ ಆಧುನಿಕ ರೂಪವಾದ ʼಹೂಲಿʼ ಎಂದೋ ಉಲ್ಲೇಖಿಸಿವೆ.
“ಪೂವಲ್ಲಿ, ಪೂವಲಿ ಎಂಬುದು ಹೂಲಿಯ ಹಳೆ ಹೆಸರು ಎನ್ನುತ್ತಾರಲ್ಲ, ಆ ಹೆಸರು ಶಾಸನದಲ್ಲಿ ಸಿಗುವುದಿಲ್ಲವೇ?”
ಎಂದರೆ, ಅದಕ್ಕೆ ಒಂಚೂರು ವಿಸ್ತೃತ ಉತ್ತರ ಕೊಡಬೇಕಾಗುತ್ತದೆ:
ನಾನು ಗಮನಿಸಿದಂತೆ
ಎರಡು ಶಾಸನಗಳಲ್ಲಿ ʼಪೂವಲ್ಲಿ/ಪೂವಲಿʼಯ
ಉಲ್ಲೇಖ ಬರುತ್ತದೆ:
೧. ಹೂಲಿಯ ಪಂಚಲಿಂಗೇಶ್ವರ
ಗುಡಿಯ ಸಂಗ್ರಹಾಲಯದಲ್ಲಿರುವ ಒಂದು ಶಾಸನ [v]೯೦೧ನೇ ಶಕವರ್ಷದಲ್ಲಿ (ಸು. ಕ್ರಿಶ.
೯೭೯) ʼಪೂವಲಿಪುರʼದ ಪಂಚವಣಿಗಿ ಮಠದ ಸಿದ್ಧನಂಜಾಚಾರ್ಯರನ್ನು ಹೊಗಳಿ
ಊರೊಡೆಯರು ಮಠವನ್ನು ಜೀರ್ಣೋದ್ಧಾರ ಮಾಡಿದ್ದನ್ನು
ದಾಖಲಿಸುತ್ತದೆ. ಆದರೆ ಲಿಪಿಶಾಸ್ತ್ರಜ್ಞರು ಈ ಬರಹವು ೧೮ನೇ ಶತಮಾನದ್ದು ಎಂದು ಲಿಪಿಸಾಮ್ಯದ ಆಧಾರದಲ್ಲಿ
ಅಭಿಪ್ರಾಯ ಪಡುತ್ತಾರೆ. ಹೀಗಾಗಿ ಇದು ಕೂಟ-ಶಾಸನವಾಗಿರದಿದ್ದರೂ, ಇದನ್ನು ೧೮ನೇ ಶತಮಾನದ ಬರಹಗಾರ ಹಳೆಯ
ಯಾವುದೋ ಒಂದು ಬರಹವನ್ನು ನೋಡಿ ಬರೆದಿರಬಹುದು, ಆ ನಡುವೆ ಕೆಲ ತಿದ್ದುಪಡಿಗಳು ನುಸುಳಿರಬಹುದು. ಅದಲ್ಲದೇ
ಸರಿಸುಮಾರು ಇದೇ ಸಮಯದ (ಕ್ರಿ.ಶ.೯೮೫) ರ ಶಾಸನವೂ, ನಂತರದ ಶತಮಾನಗಳ ಹಲವಾರು ಶಾಸನಗಳು
ಹೂಲಿಯನ್ನು ʼಪೂವಲಿಪುರʼ ಎಂದು ಕರೆಯುವುದಿಲ್ಲ.
ಹೀಗಾಗಿ ಹೂಲಿಯ ಗ್ರಾಮನಾಮ ವಿವೇಚನೆಗೆ ಈ ಶಾಸನ ಕಡಿಮೆ ನಂಬಲರ್ಹ ಆಧಾರ.
೨. ಲಕ್ಷ್ಮೇಶ್ವರದ
ಕ್ರಿ.ಶ.೧೫೧೩ರ ಶಾಸನವು [vi]
ʼರೇಣುಕಾಚಾರ್ಯರು ಪೂವಲ್ಲಿ ಮರುಳ ಸಿದ್ಧೇಶ್ವರ ನಾಮವನ್ನು ಧರಿಸಿ ನಿಜಮಹಾತ್ಮೆಯನ್ನು ಮೆರೆದು, ಪುಲಿಗೆರೆಗೆ ಬಂದು
ಸಕಲ ಭಕ್ತರ ಇಷ್ಟಾರ್ಥವನ್ನು ಪೂರೈಸಿ ಶ್ರೀದಕ್ಷಿಣ ಸೋಮೇಶ್ವರನ
ಸಾನಿಧ್ಯದಲ್ಲಿ ಲಿಂಗೈಕ್ಯರಾದರು. ಅವರ
ಶಿಷ್ಯನಾದ ಪರುವತ ಸೆಟ್ಟಿಯು ಒಂದು ಶಿವಾಲಯವನ್ನು ಕಟ್ಟಿ, ಹೂದೋಟವನ್ನೂ, ಬಾವಿಯನ್ನೂ ಅದಕ್ಕೆ ದಾನಮಾಡಿದನುʼ ಎಂದು ಹೇಳುತ್ತದೆ. ಇನ್ನೂ ಒಂದು ವಿಶೇಷವೆಂದರೆ ಈ ಶಾಸನದಲ್ಲಿ ಪೂವಲ್ಲಿ ಎಂದು ಎರಡು ಸಲ ಉಲ್ಲೇಖಿಸಿದ್ದರೆ,
ʼಪೂಲಿʼ ಎಂದೂ ಮೂರು ಸಲ ಉಲ್ಲೇಖಿಸಲಾಗಿದೆ.
ನಡುಗನ್ನಡ ಸಾಹಿತ್ಯದಲ್ಲಿ
ಹೂಲಿಯ ಹೆಸರು
ಸುಮಾರು ಕ್ರಿ.ಶ.೧೬೫೦ರ ಕಾಲದ ಹೂಲಿಯ ಶಿವಕವಿ ಸಿದ್ಧನಂಜೇಶ ತನ್ನ ʼಗುರುರಾಜ ಚಾರಿತ್ರ[vii]ʼ ಕಾವ್ಯದಲ್ಲಿ ಹೂಲಿ ಮತ್ತು
ಪೂವಲ್ಲಿ ಎರಡೂ ಹೆಸರನ್ನು ಬಳಸಿದ್ದಾನೆ. ಉದಾಹರಣೆಗೆ “ಹರನ ಕೊರಳ ಪೂಮಾಲೆ ಹೂಲಿ” ಎಂದು ಮೊದಲ
ಅಧ್ಯಾಯದ ೩೭ನೇ ಪದ್ಯದಲ್ಲಿ ಹೊಗಳಿದರೆ, “ಧಾತ್ರಿಗುತ್ತಮನೆನಿಪ ಪೂವಲ್ಲಿಪುರಕಧಿಪ ಚಿತ್ರಗುರು ಪಂಚವಣ್ಣಿಗೆ
ಸಿದ್ಧನಂಜೇಶ” ಎಂದು ಅದೇ ಅಧ್ಯಾಯದ ೭೯ನೇ ಪದ್ಯದಲ್ಲಿ ತನ್ನ ಗುರುವನ್ನು ನೆನೆಸಿಕೊಂಡಿದ್ದಾನೆ,
ಹೂಲಿ ಎಂಬ ಗಿಡ:
ಅಂದ್ಹಾಗೆ, ನಿಘಂಟಿನಲ್ಲಿ ಮೂರನೆ ಅರ್ಥವಿತ್ತಲ್ಲ – “ಒಂದು ಜಾತಿಯ ಗಿಡ” ಅದಾವುದು ?
ಆ ಗಿಡದ ಇನ್ನಿತರ ಹೆಸರುಗಳು- ಅನ್ಸೋಲೆ,ಆನ್ಸೋಲೆ, ಕರೆಹೂಲಿ,
ಕೆಂಪುಹುಳಿ, ಗಂಡಪಚ್ಚಾರಿ, ಬಾಮರಿ,ಬಿಳಿಸೂಲಿಗೆ.
ಅದರ ವೈಜ್ಞಾನಿಕ ಹೆಸರು: Breynia rhamnoides.[viii]
ಚಿತ್ರದ ಸೆಲೆ: https://commons.wikimedia.org/w/index.php?curid=22874424
ಕಸದಂತೆ ಬೆಳೆಯುವ ಈ
ಗಿಡ ಚಿಕ್ಕ-ಚಿಕ್ಕ ಕೆಂಪು ಹಣ್ಣು ಬಿಡುತ್ತದೆ. ಅದಕ್ಕೆ ಆಯುರ್ವೇದದಲ್ಲಿ ಕೆಲವು ಉಪಯೋಗಗಳಿವೆ ಎಂದು
ಹೇಳುತ್ತಾರೆ.
ನಾಮವಿಜ್ಞಾನ ಶಾಸ್ತ್ರಜ್ಞರು ಈ ಹೂಲಿ ಕಂಟಿಗಳಿಂದಾಗಿ ಊರಿಗೆ
ಆ ಹೆಸರು ಬಂದಿರಬಹುದು ಎಂದು ಊಹಿಸುತ್ತಾರೆ. [ix]
ಉಪಸಂಹಾರ:
ಲಭ್ಯವಿರುವ ಎಲ್ಲ ಆಧಾರಗಳನ್ನು ಗಮನಿಸಿ, ಕ್ರಿ.ಶ.೧೫೧೩ಕ್ಕಿಂತ ಮೊದಲಿನ ಎಲ್ಲ ಬರಹಗಳಲ್ಲಿ ಪೂಲಿ/ಹೂಲಿ
ಎಂದೇ ಗುರುತಿಸಿಕೊಂಡಿರುವ ಈ ಊರಿಗೆ ಅದೇ ಮೂಲ ಹೆಸರಾಗಿದ್ದು ನಂತರದ ಶತಮಾನಗಳಲ್ಲಿ ʼಪೂವಲ್ಲಿ/ಪೂವಾಲಿʼ ಎನ್ನುವುದು ಚಂದ ಎಂಬ ಕಾರಣಕ್ಕಾಗಿ
ಬಳಸಿದಂತೆ ಕಾಣುತ್ತದೆ. ಪೂವಾಲಿ – ಎಂದರೆ ಹೂಮಾಲೆ,
ಪೂವಲ್ಲಿ ಎಂದರೆ ಹೂವಿನಹಳ್ಳಿ. ಕಸದ ಗಿಡದಿಂದಾಗಿ ಬಂದ ಹೆಸರಿನಿಗಿಂತ ʼಹೂʼವಿಗೆ ಸಂಬಂಧಿತ ಹೆಸರು ಎಂದು
ಹೇಳಿಕೊಳ್ಳಲು ಎಲ್ಲರಿಗೂ ಹೆಮ್ಮೆಯಲ್ಲವೇ ?
[ii] ಬೆಳಗಾವಿ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ವ, ಪುಟ
೧೭೦.
[iii] ಕರ್ನಾಟಕ ಇನ್ಸ್‌ಕ್ರಿಪ್ಷನ್ಸ್ - ಸಂಪುಟ ೫, ಪುಟ
೨೦೨-೨೧೦
[iv] ಕರ್ನಾಟಕ ಇನ್ಸ್‌ಕ್ರಿಪ್ಷನ್ಸ್ - ಸಂಪುಟ ೬, ಪುಟ
೨೦೧-೨೧೫
[v] ಬೆಳಗಾವಿ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ವ – ಪುಟ
೧೭೫.
[vi] ಸೌತ್ ಇಂಡಿಯನ್ ಇನ್ಸ್‌ಕ್ರಿಪ್ಷನ್ಸ್ - ಸಂಪುಟ
-೨೦, ಶಾಸನ ಸಂ:೩೯೦.
[vii] ಶ್ರೀ ಸಿದ್ಧನಂಜೇಶ ವಿರಚಿತ ಶ್ರೀ ಗುರುರಾಜ ಚಾರಿತ್ರ
– ಸಂ: ಪ್ರೋ. ಸಂ.ಶಿ.ಭೂಸನೂರಮಠ (೧೯೫೦)
[viii]
ಕೆಲವು
ಸಸ್ಯಗಳ ವೈಜ್ಞಾನಿಕ ಕುಟುಂಬ ಹಾಗೂ ಕನ್ನಡ ಹೆಸರುಗಳು – ಶ್ರೀ ಎಸ್.ಜಿ.
ನರಸಿಂಹಾಚಾರ್(೧೯೭೯)
[ix] ಬೆಳಗಾವಿ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ವ – ಪುಟ
೫೪೩
No comments:
Post a Comment