Friday, 29 November 2024

ಹೂಲಿಯ ಬಗೆಗಿನ ಶ್ರೀ ಚನ್ನಪ್ಪ ಎರೇಸೀಮೆ ಅವರ ೧೯೮೨ರ ಬರಹ

 (ಸಿದ್ಧಗಂಗಾ ಮಾಸಪತ್ರಿಕೆಯಲ್ಲಿ ೧೯೮೨ರಲ್ಲಿ ಪ್ರಕಟವಾಗಿದ್ದ ಬರಹ - ಸಿದ್ಧಗಂಗಾ ಮಾಸಪತ್ರಿಕೆ ಲಿಂಕ್)‌
















ಹೂಲಿಯ ಶಾಸನಗಳ ಪಠ್ಯಗಳು - ೪

   (From South indian Inscriptions - V )






ಹೂಲಿಯ ಶಾಸನಗಳ ಪಠ್ಯಗಳು - ೨

  (From South indian Inscriptions - V )



ಹೂಲಿಯ ಶಾಸನಗಳ ಪಠ್ಯಗಳು - ೩

  (From South indian Inscriptions - V )





ಹೂಲಿಯ ಶಾಸನಗಳ ಪಠ್ಯಗಳು - 1

 (From South indian Inscriptions - V )








Sunday, 14 July 2024

ಹೂಲಿಯ ಬಗೆಗಿನ ಶ್ರೀ ಕೆಂಗೇರಿ ಚಕ್ರಪಾಣಿ ಅವರ ಬರಹ

 (ಬರಹವನ್ನು ಶ್ರೀ ಚಕ್ರಪಾಣಿ ಅವರ ಫೇಸ್ಬುಕ್ ಪುಟದಿಂದ ಆಭಾರಪೂರ್ವಕವಾಗಿ ನಕಲಿಸಲಾಗಿದೆ - https://www.facebook.com/photo.php?fbid=2733246153625143&set=a.1434155710200867&type=3&mibextid=rS40aB7S9Ucbxw6v)


Wednesday, 15 May 2024

ಹೂಲಿಯ ಶಾಸನಗಳ ಹಿನ್ನೆಲೆಯಲ್ಲಿ ಮಧ್ಯಯುಗೀನ ಕರ್ನಾಟಕದ ವಾಸ್ತುಶಿಲ್ಪ ಪರಿಭಾಷೆ

 (ಈ ಬರಹ ಖ್ಯಾತ ವಿದ್ವಾಂಸ ಶ್ರೀ ಶ್ರೀನಿವಾಸ ಪಾಡಿಗಾರರ  "Architectural Terms in the Epigraphs of the  Panchalingeshwar Temple at Huli" ಪ್ರಬಂಧದ ಕೃತಿಚೌರ್ಯ ಎನಿಸುತ್ತದೆ.)


ʼಇಂಟರ್ನ್ಯಾಶನಲ್‌ ಜರ್ನಲ್‌ ಆಫ್‌ ಕನ್ನಡ ರಿಸರ್ಚ್‌ʼ ದಲ್ಲಿ ಪ್ರಕಟವಾದ ಬರಹ. ಇದೇ ಬರಹದ ಇಂಗ್ಲೀಷ ರೂಪ https://www.ijfmr.com/papers/2023/6/8759.pdf ದಲ್ಲಿ ಪ್ರಕಟವಾಗಿದೆ.







Tuesday, 7 May 2024

ಹೂಲಿಯ ಪಂಚಲಿಂಗೇಶ್ವರ ಗುಡಿಯ ಜೈನ ಹಿನ್ನೆಲೆ

 ('ಆಕೃತಿ ಕನ್ನಡ' ಜಾಲ ಪತ್ರಿಕೆಯಲ್ಲಿ “ಹರನ ಕೊರಳ ಹೂಮಾಲೆ- ಹೂಲಿ" ಸರಣಿಯಲ್ಲಿ ಪ್ರಕಟವಾದ ಬರಹ)

ಪಂಚಲಿಂಗೇಶ್ವರ ಗುಡಿ ಮೂಲತಃ ಜೈನ ಬಸದಿಯಾಗಿತ್ತು ಎನ್ನುವುದು ನಿಜವೇ ?

ಪಂಚಲಿಂಗೇಶ್ವರ ಗುಡಿ ಹಿಂದೆ ಜೈನ ಬಸದಿ ಆಗಿತ್ತು ಎನ್ನುವುದರಲ್ಲಿ ತಜ್ಞರಿಗೆ ಯಾವುದೇ ಅನುಮಾನವಿಲ್ಲ. ಅದಕ್ಕೆ ಹಲವಾರು ಸಾಕ್ಷಿಗಳು ಲಭ್ಯವಿವೆ:

೧. ಪಂಚಲಿಂಗೇಶ್ವರ ಗುಡಿಯ ಪೂರ್ವಕ್ಕೆ ಮುಖಮಾಡಿದ ಮೂರು ಗರ್ಭಗೃಹಗಳಲ್ಲಿ ಮೂರನೆಯದರ ಬಾಗಿಲುಪಟ್ಟಿಯ ಮೇಲಿರುವ ಶಾಸನ[i]ದಲ್ಲಿ ಆಚಾರ್ಯರಾದ ಶ್ರೀ ಪ್ರಭಾಚಂದ್ರ ಸಿದ್ಧಾಂತದೇವರ ಶಿಷ್ಯರು ಕ್ರಿಶ ೧೨೨೦ರಲ್ಲಿ ʼಮಾಣಿಕ್ಯತೀರ್ಥʼ (ಬಸದಿ)ಯ ಆ ದ್ವಾರಶಾಖೆಯನ್ನು ಮಾಡಿಸಿದ ವಿಷಯವಿದೆ.



 

ಸವದತ್ತಿಯ ಕ್ರಿ.ಶ ೧೨೨೮ರ ಶಾಸನವೂ ಶ್ರೀ ಪ್ರಭಾಚಂದ್ರ ಸಿದ್ಧಾಂತದೇವರನ್ನು ಹೂಲಿಯ ʼಮಾಣಿಕ್ಯತೀರ್ಥ ಬಸದಿಯಾಚಾರ್ಯʼ ಎಂದು ಕರೆದಿರುವುದರಿಂದ ಇಂದಿನ ಪಂಚಲಿಂಗಪ್ಪನ ಗುಡಿ ಹಿಂದೆ ಮಾಣಿಕ್ಯತೀರ್ಥ ಬಸದಿಯಾಗಿತ್ತು ಎನ್ನುವುದರಲ್ಲಿ ಸಂಶಯವಿಲ್ಲ.

ಖ್ಯಾತ ಪುರಾತತ್ವ ವಿದ್ವಾಂಸ ಡಾ.ಶ್ರೀನಿವಾಸ ಪಾಡಿಗಾರರ ಪ್ರಕಾರ ʼತೀರ್ಥ ಬಸದಿʼ ಎನ್ನುವುದು ತೀರ್ಥಂಕರರ ಮೂರ್ತಿಗಳನ್ನು ಸ್ಥಾಪಿಸಿದ ಬಸದಿಗಳಿಗೆ ಬಳಸುತ್ತಿದ್ದ ಹೆಸರು. ಇಲ್ಲಿ ಮುಖ್ಯ ಮೂರು ಗರ್ಭಗುಡಿಯಲ್ಲಿ ೨೨ ತೀರ್ಥಂಕರರ ಮೂರ್ತಿಗಳನ್ನು ಮತ್ತು ಉಳಿದೆರಡು ಗರ್ಭಗೃಹಗಳಲ್ಲಿ ಒಂದೊಂದು ತೀರ್ಥಂಕರರ ಮೂರ್ತಿ ಸ್ಥಾಪಿತವಾಗಿದ್ದಿರಬಹುದು ಎಂದು ಡಾ. ಪಾಡಿಗಾರರ ಊಹೆ. ಮಧ್ಯದ ಮೂರು ಮುಖ್ಯ ಗರ್ಭಗುಡಿಗಳ ನಡುವೆ ಗೋಡೆಗಳಿರದೇ ಇರೋದು ಅವರ ವಾದಕ್ಕೆ ಪುಷ್ಠಿಕೊಡುತ್ತದೆ. ಈ ಗುಡಿಯನ್ನು ಕೆಂಪು ಕಲ್ಲಿನಿಂದ ಕಟ್ಟಿರುವುದರಿಂದ ʼ ಮಾಣಿಕ್ಯತೀರ್ಥʼ ಎಂದು ಹೆಸರು ಬಂದಿರಬಹುದು.    

 

೨. ಬಾಗಿಲ ಪಟ್ಟಿಗಳಲ್ಲಿರುವ ತ್ರುಟಿತ ಜಿನಬಿಂಬ:

ಜೈನ ಬಸದಿಳಲ್ಲಿ ಬಾಗಿಲ ಪಟ್ಟಿಯ ಮೇಲೆ (ಲಲಾಟಬಿಂಬದಲ್ಲಿ) ಜಿನಬಿಂಬ ಇರೋದು ಸಾಮಾನ್ಯ. ಪಂಚಲಿಂಗೇಶ್ವರ ಗುಡಿಯ ಐದು ಗರ್ಭಗುಡಿಗಳ ಬಾಗಿಲುಗಳ ಮೇಲೆ ಮತ್ತು ಗುಡಿಯ ಮುಖ್ಯ ಬಾಗಿಲಿನ ಮೇಲೆಯೂ ಜಿನಬಿಂಬ ಇದ್ದಿರಬಹುದು. ಆದರೆ ಈಗ ಎಲ್ಲ ಬಾಗಿಲಪಟ್ಟಿಗಳ ಮೇಲಿನ ಜಿನಬಿಂಬಗಳನ್ನು ಕಿತ್ತಿ ಹಾಳುಮಾಡಲಾಗಿದೆ, ಆದರೆ ಉತ್ತರದಿಕ್ಕಿಗೆ ಮುಖ ಮಾಡಿರುವ ಗರ್ಭಗೃಹದ ಬಾಗಿಲಪಟ್ಟಿಯ ಮೇಲಿನ ಜಿನಬಿಂಬ ಹಾಳಾಗಿದ್ದರೂ ಗುರುತಿಸಬಹುದು..     


 


೩. ಗೋಪುರದಲ್ಲಿನ ಜೈನ ಸರಸ್ವತಿ, ಯಕ್ಷಿ ಮೂರ್ತಿಗಳು.



೪. ಇತರ ಶಾಸನ ಆಧಾರಗಳು:

ಮೇಲೆ ಹೇಳಿದ ಕ್ರಿ.ಶ.೧೨೨೦ರ ಶಾಸನದಂತೆಯೇ, ಪೂರ್ವಕ್ಕೆ ಮುಖಮಾಡಿದ ಮೂರು ಗರ್ಭಗೃಹಗಳಲ್ಲಿ ಮೊದಲನೆಯದರ ಬಾಗಿಲುಪಟ್ಟಿಯ ಮೇಲೆ ಕಾಲ ನಮೂದಿಸದ, ಸುಮಾರು ೧೨-೧೩ನೇ ಶತಮಾನದ ಬರಹವೊಂದಿದೆ. ಅದರಲ್ಲಿ ಜೈನ ಗುರುಗಳಾದ ಶ್ರೀ ನೇಮಿಚಂದ್ರ ಸಿದ್ಧಾಂತ ಚಕ್ರವರ್ತಿಗಳ ಶಿಷ್ಯರು ಎರಡು ದ್ವಾರಶಾಖೆಗಳನ್ನು ಮಾಡಿಸಿದ ವಿಷಯವಿದೆ. ಅದಲ್ಲದೇ ಗುಡಿಯಲ್ಲಿ ಸಿಕ್ಕ ಇನ್ನೂ ಒಂದು ಶಾಸನ ಫಲಕವೂ (EI XVIII ೨೨/H) ಜೈನಧರ್ಮಕ್ಕೆ ಸಂಬಂಧಿಸಿದೆ. ಅವೆರಡೂ ಶಾಸನಗಳು ಗುಡಿಯ ಜೈನ ಹಿನ್ನೆಲೆಯನ್ನು ಧೃಢೀಕರಿಸುತ್ತವೆ.

ಹಾಗೆಯೇ:

  • ·         ಈಗ ಗುಡಿಯ ಸಭಾಮಂಟಪದಲ್ಲಿ ಬಾಗಿಲ ಪಕ್ಕದಲ್ಲಿ ಇಟ್ಟಿರುವ ವೈಷ್ಣವ ಶಾಸನ ಫಲಕ ೧೮೮೨ರ ಸುಮಾರಿನಲ್ಲಿ ಶ್ರೀ ಫ್ಲೀಟ್‌ರು ವಿರಕ್ತಮಠದ ಹೊರಗಿದ್ದುದನ್ನು ತಂದು ಇಟ್ಟದ್ದು.
  • ·         ಅದೇ ಬಾಗಿಲ ಇನ್ನೊಂದು ಪಕ್ಕದಲ್ಲಿರುವ ಶೈವ ಶಾಸನ ಫಲಕ ನಂತರದಲ್ಲಿ ಯಾರೋ, ಎಲ್ಲಿಂದಲೋ ತಂದಿಟ್ಟದ್ದು. ಅದನ್ನು ಶ್ರೀ ಫ್ಲೀಟ್‌ರು ದಾಖಲಿಸಿಲ್ಲ, ಅಂದರೆ ಅದನ್ನು ಕ್ರಿ.ಶ ೧೮೮೨ರ ನಂತರದಲ್ಲಿ ತಂದಿರಲಾಗಿದೆ.

 

ಮೂಲತಃ ಜೈನ ಬಸದಿಯಾಗಿದ್ದು ಗುಡಿಯಾಗಿ ಬದಲಾದದ್ದು ಯಾವಾಗ ?

          ಗುಡಿಯ ಅಧಿಷ್ಢಾನ, ಮಕರಪಟ್ಟಿಗಳ ಮೇಲಿರುವ ಬರಹಗಳ ಲಿಪಿ ಸಾಮ್ಯತೆಯಿಂದ ಈಗಿನ ಗುಡಿಯ ಕಟ್ಟಡವನ್ನು ಜೀರ್ಣೋದ್ಧಾರ ಮಾಡಿದ್ದು ೧೩ನೇ ಶತಮಾನದ್ದು ಎಂದು ಹೇಳಬಹುದು. ಗುಡಿಯ ದ್ವಾರಶಾಖೆಯಲ್ಲಿರುವ ಎರಡು ಶಾಸನಗಳ ಕಾಲವೂ ಅದೇ ಸಮಯದ್ದಾಗಿದ್ದು, ಈ ತಥ್ಯವನ್ನು ಧೃಢೀಕರಿಸುತ್ತವೆ.  ಆದರೆ ಅದಕ್ಕಿಂತ ಮೊದಲಿದ್ದ ಬಸದಿಯ ಉಲ್ಲೇಖವಿದೆಯಾ ?

          ಹೂಲಿಯಲ್ಲಿ ಸಿಕ್ಕ ಅತ್ಯಂತ ಹಳೆಯ ದಾಖಲೆ, ೬ನೇ ಶತಮಾನ ಮಂಗಳೇಶನ ತಾಮ್ರ ಶಾಸನ. ಅದರಲ್ಲಿ ಸೇಂದ್ರಕ ವಂಶದ ರವಿಶಕ್ತಿಯು ʼಕಿರುವಟ್ಟಗೆರೆʼಯ ೫೦ ನಿವರ್ತನ ಭೂಮಿಯನ್ನು ʼಶಾಂತಿನಾಥ ಬಸದಿʼಗಾಗಿ ದಾನ ಮಾಡಿದ್ದನ್ನು ದಾಖಲಿಸಲಾಗಿದೆ.

          ʼಶಾಂತಿನಾಥ ಬಸದಿʼಯೇ ಪಂಚಲಿಂಗೇಶ್ವರ ಗುಡಿ ಎಂದು ಹೇಳಲು ಸಾಕಷ್ಟು ಸಾಕ್ಷಗಳಿಲ್ಲ. ಅಷ್ಟೇ ಅಲ್ಲ, ಅಲ್ಲಿ ಉಲ್ಲೇಖವಾಗಿರುವ ʼಕಿರುವಟ್ಟಕೆರೆ ಗ್ರಾಮʼ ಕೆಲ ಪಂಡಿತರು ಊಹಿಸಿದಂತೆ ಹೂಲಿಯ ಭಾಗವಾಗಿರದೇ, ಗದಗ ಜಿಲ್ಲೆಯ ʼಕಿರೀಟಗೇರಿʼಯೂ ಆಗಿರಬಹುದು.

          ಹೂಲಿಯ ಕ್ರಿಶ ೧೦೪೩ರ ಶಾಸನ ಲಚ್ಚಿಯಬ್ಬರಸಿ ಎಂಬ ಹೆಣ್ಣುಮಗಳು ಒಂದು ಬಸದಿಯನ್ನು ಜೀರ್ಣೋದ್ಧಾರ ಮಾಡಿದನ್ನು ಉಲ್ಲೇಖಿಸುತ್ತದೆ. (EI XVIII ೨೨/ಬಿ)

          ಈ ಶಾಸನ ಫಲಕ ಈಗ ಪಂಚಲಿಂಗೇಶ್ವರ ಗುಡಿಯಿಂದ ಕೆಲವೇ ಗಜಗಳಲ್ಲಿರುವ ವೀರಭದ್ರದೇವರ ಗುಡಿಯ (ಇದು ಆಧುನಿಕ ಗುಡಿ) ಗೋಡೆಯಲ್ಲಿರುವುದರಿಂದ ಉಲ್ಲೇಖಿತ ಬಸದಿ ಪಂಚಲಿಂಗೇಶ್ವರ ಗುಡಿಯಿದ್ದಲ್ಲಿಯೇ ಇದ್ದಿರಬಹುದು. ಪಂಚಲಿಂಗೇಶ್ವರ ಗುಡಿಯ ಆವರಣದಲ್ಲಿಯೇ ಇದ್ದಿರಬಹುದಾಗಿದ್ದ ಈ ಶಾಸನ ಫಲಕ ಸ್ಥಳಾಂತರಗೊಂಡು,  ವೀರಭದ್ರದೇವರ ಗುಡಿಯನ್ನು ಕಟ್ಟುವಾಗ ಅದನ್ನು ಗೋಡೆಯಲ್ಲಿ ಅಳವಡಿಸಿಕೊಂಡಿರಬಹುದು.

          ಹನ್ನೆರಡನೆ ಶತಮಾನದ್ದೆಂದು ತಜ್ಞರು ಊಹಿಸಿರುವ, ಬಹುಭಾಗ ಹಾಳಾಗಿ ಹೋಗಿರುವ ಜೈನ ಶಾಸನ (EI XVIII ೨೨/H)ದಲ್ಲಿ ಗಂಗವಂಶದ ಒಂದು ಅನಾಮಿಕ ಟಿಸಿಲಿನ ರಾಜ ಪಿಟ್ಟನ ಮಗ ಬಿಜ್ಜಳ ಎನ್ನುವವನು ೨೪ ತೀರ್ಥಂಕರರ ಮೂರ್ತಿಮಾಡಿಸಿದ್ದು ದಾಖಲಾಗಿದೆ. ಈ ಶಾಸನದ ಕಲ್ಲು ಪಂಚಲಿಂಗ ಗುಡಿಯ ಆವರಣದಲ್ಲಿಯೇ ಇರುವುದು, ಅದರ ಹಾಳಾದ ಸಾಲುಗಳಲ್ಲಿ ʼಮಾಣಿಕ್ಯ ತೀರ್ಥʼದ ಉಲ್ಲೇಖವಿರುವುದು, ಈ ಮೊದಲು ಹೇಳಿದ ಡಾ. ಪಾಡಿಗಾರರ ಊಹೆಗೆ ಪುಷ್ಟಿಕೊಡುತ್ತದೆ. 

          ಕ್ರಿಶ ೧೨೦೪ರ ಕೊಪ್ಪಳ ಶಾಸನವು [iii]ಜೈನ ತೀರ್ಥಸ್ಥಳಗಳಾದ ಕೊಳತ್ತೂರು, ಲೊಕ್ಕಿಗುಂಡಿ, ಕುಪಣ, ಬಂಕಾಪುರ, ಹೂಲಿ, ಕೋಗಳಿ, ಮುಳುಗುಂದ, ಅಶೋಕೆ, ಬಟ್ಟಕೆಱೆ, ಹಾನುಗಂಲ್ಲು, ನವಿಲ್ಗುಂದ, ಬೆಳಗುಳ, ಬಂದಣಿಕಾಪುರ, ಪುರಿಕರ- ಮುಂತಾದ ಊರುಗಳಲ್ಲಿನ ಚೈತ್ಯಾಲಯಗಳನ್ನು ಕವಡೆ ಬೊಪ್ಪಶೆಟ್ಟಿಯು ಜೀರ್ಣೋದ್ಧಾರ ಮಾಡಿದನುಎಂದು ತಿಳಿಸುತ್ತದೆ. ಕವಡೆ ಬೊಪ್ಪಶೆಟ್ಟಿಯು ಹೆಸರಾಂತ ಜಿನಭಕ್ತ,  ಮೊದಲು ಕಲಚೂರಿಗಳಲ್ಲಿ, ನಂತರ ಹೊಯ್ಸಳ ವೀರಬಲ್ಲಾಳನಲ್ಲಿ ಮಂತ್ರಿಯಾಗಿದ್ದವನು. ಈತನು ಹೂಲಿಯಲ್ಲಿ ಜೀರ್ಣೋದ್ಧಾರ ಮಾಡಿದ ಬಸದಿಯೇ ಈಗಿನ ಪಂಚಲಿಂಗೇಶ್ವರ ಗುಡಿಯಾಗಿರಬಹುದು.

          ಕ್ರಿಶ ೧೨೨೦ರ ದ್ವಾರಶಾಖೆಯ ಶಾಸನದಲ್ಲಿ ಜೈನ ಮುನಿ ಪ್ರಭಾಚಂದ್ರ ಸಿದ್ಧಾಂತದೇವರುಗಳನ್ನು ಹೆಸರಿಸಿರುವುದರಿಂದ ಆ ಕಾಲದಲ್ಲಿಯಂತೂ ಇದು ಬಸದಿಯಾಗಿಯೇ ಇತ್ತು.

          ನಾಗರಾಶಿಯ ಕಂಬ ಶಾಸನ (EI XVIII ೨೨/I) : ಕಾಳಾಮುಖ ಗುರುಗಳಾಗಿದ್ದ ಜ್ಞಾನಶಕ್ತಿಯ ಶಿಷ್ಯ ನಾಗರಾಶಿಯು ಆ ಕಂಬವನ್ನು ಮಾಡಿಸಿದ ವಿಷಯದಿಂದ ಆ ಶಾಸನ ಬರೆಸುವ ಕಾಲಕ್ಕೆ ಗುಡಿ ಜೈನರ ಅಧೀನದಿಂದ ಕಾಳಾಮುಖರ ಆಡಳಿತಕ್ಕೆ ಒಳಪಟ್ಟಿತ್ತು ಎಂದು ಊಹಿಸಬಹುದು. ಈ ಶಾಸನದಲ್ಲಿ ಕಾಲ ದಾಖಲಾಗಿಲ್ಲ, ಆದರೆ ಲಿಪಿಸಾಮ್ಯದಿಂದ ೧೨-೧೩ನೇ ಶತಮಾನದ್ದೆಂದು ಊಹಿಸಬಹುದು.



          EI XVIII ೨೨/E ಶಾಸನದ ಮೊದಲ ಭಾಗಲ್ಲಿ ಕ್ರಿಶ ೧೧೦೪ರಲ್ಲಿ ಜ್ಞಾನಶಕ್ತಿ ಗುರುವಿನ ಶಿಷ್ಯ ಆಚಾರ್ಯ ತತ್ಪುರುಷರು ಉಂಬಳಿ ಸ್ವೀಕರಿಸಿದ ದಾಖಲೆಯಿದೆ. ಅದೇ ಶಾಸನದ ಎರಡನೇ ಭಾಗದಲ್ಲಿ ಕ್ರಿಶ ೧೧೬೨ರಲ್ಲಿ  ಜ್ಞಾನಶಕ್ತಿ ಆಚಾರ್ಯರೇ ದಾನಕೊಟ್ಟ ದಾಖಲೆಯಿದೆ.  ಕ್ರಿ.ಶ. ೧೧೦೪ರಲ್ಲಾಗಲೇ ಚಾಳುಕ್ಯ ಚಕ್ರವರ್ತಿ ಭುವನೈಕ್ಯಮಲ್ಲನಿಂದ ಪೂಜಿತಗೊಂಡು, ಅಂಧಾಸುರ ಗುಡಿ ಕಟ್ಟಿ, ಅಲ್ಲಿ ತಮ್ಮ ಶಿಷ್ಯನನ್ನು ಉಂಬಳಿ ಸ್ವೀಕರಿಸುವಷ್ಟು ಮಟ್ಟಿಗೆ ಬೆಳೆಸಿದ್ದ ಜ್ಞಾನಶಕ್ತಿ ಆಚಾರ್ಯರು ಮುಂದೆ ೫೮ ವರ್ಷ ಬದುಕಿದ್ದರೆ ? ಅಥವಾ ಮೊದಲನೇ ಭಾಗದಲ್ಲಿ ಹೇಳಿದ ಮತ್ತು ಎರಡನೇ ಭಾಗದಲ್ಲಿ ಹೇಳಿದ ಜ್ಞಾನಶಕ್ತಿ ಆಚಾರ್ಯರು ಬೇರೆ-ಬೇರೆಯೇ ? ಏನಾದರೂ  ಇವರು (ಅಥವಾ ಇವರಿಬ್ಬರು) ನಾಗರಾಶಿಗಿಂತ ಒಂದು ಶತಮಾನವಾದರೂ ಹಿಂದಿನವರು, ಹಾಗಾಗಿ ಅವನ ಗುರು ಜ್ಞಾನಶಕ್ತಿ ಆಗಿರಲು ಸಾಧ್ಯವಿಲ್ಲ.

          EI XVIII ೨೨/K ಶಾಸನವೂ ಜ್ಞಾನಶಕ್ತಿ ಆಚಾರ್ಯರು ಅಂಧಕಾಸುರ ದೇವರ ಗುಡಿಯ ಮಕರತೋರಣ ಮಾಡಿಸಿದ್ದನ್ನು ದಾಖಲಿಸುತ್ತದೆ. ಶಾಸನದಲ್ಲಿ ಕಾಲ ದಾಖಲಾಗಿಲ್ಲ. ಲಿಪಿಸಾಮ್ಯದಿಂದ ಇದು ಮತ್ತು ನಾಗರಾಶಿಯ ಕಂಬ ಶಾಸನವೂ ಒಂದೇ ಕಾಲದ್ದು ಮತ್ತು ಎರಡರಲ್ಲಿ ಉಲ್ಲೇಖಿಸಿದ ಜ್ಞಾನಶಕ್ತಿ ಆಚಾರ್ಯರು ಒಬ್ಬರೇ ಎನ್ನಬಹುದು.

          ತಜ್ಞರ ಪ್ರಕಾರ ಹೂಲಿಯ ಹಿರೇಮಠ, ಕಾಳಾಮುಖ ಸಂಪ್ರದಾಯದ ಮುಂದುವರಿಕೆ. ಹೀಗಾಗಿ ಮಠದ ಪಟ್ಟಾವಳಿ[iv]ಯನ್ನು ಅಚಾರ್ಯರ ಕಾಲ ತೀರ್ಮಾನಕ್ಕಾಗಿ ಬಳಸಬಹುದು. ಪಟ್ಟಾವಳಿಯ ಕ್ರಮಸಂಖ್ಯೆ ೨೫ರಿಂದ -೩೦ರ ವರೆಗಿನ ಪೀಠಾಧಿಪತಿಗಳ ಹೆಸರುಗಳು EI XVIII ೨೨/E ಶಾಸನದಲ್ಲಿ ದಾಖಲಿಸಿದ ಗುರುಪಂರಂಪರೆಯೊಂದಿಗೆ ಹೊಂದಿಕೆಯಾಗುತ್ತವೆ. ಪಟ್ಟಾವಳಿಯಲ್ಲಿನ ೨೯ನೇ ಪೀಠಾಧಿಪತಿ ಜ್ಞಾನಶಕ್ತಿ ಆಚಾರ್ಯರ ಪಟ್ಟದ ಅವಧಿಯನ್ನು ಕ್ರಿಶ ೧೦೬೪ರಿಂದ ೧೦೯೩ರ ವರೆಗೆ ಮತ್ತು ೩೦ನೇ ಪೀಠಾಧಿಪತಿ ತತ್ಪುರುಷ ಆಚಾರ್ಯರ ಅವಧಿಯನ್ನು ಕ್ರಿ.ಶ ೧೦೯೩ ರಿಂದ ೧೧೦೬ರವರೆಗೆ ಎಂದು ಹೇಳಿದೆ. ಅದರಿಂದ EI XVIII ೨೨/E ಶಾಸನದ ಮೊದಲ ಭಾಗದ ಜ್ಞಾನಶಕ್ತಿ ಆಚಾರ್ಯರ ಕಾಲ ಹೊಂದಿಕೆಯಾಗುತ್ತದೆ ಮತ್ತು  ಶಾಸನದ ಎರಡನೆ ಭಾಗದಲ್ಲಿ ಬರುವ ಜ್ಞಾನಶಕ್ತಿಗಳಿಗೆ ಯಾವುದೇ ಆಧಾರ ಸಿಗುವುದಿಲ್ಲ.

           ಅದೇ ಪಟ್ಟಾವಳಿಯ ಕ್ರಮಸಂಖ್ಯೆ ೩೭ರಲ್ಲಿಯೂ ಒಬ್ಬ ಜ್ಞಾನಶಕ್ತಿ ಆಚಾರ್ಯರಿದ್ದಾರೆ – ಅವರ ಪಟ್ಟದ ಕಾಲ ಕ್ರಿಶ ೧೩೦೯-೧೩೩೬. ಈ ಜ್ಞಾನಶಕ್ತಿಗಳು ನಾಗರಾಶಿ ಶಾಸನದ ಕಾಲಕ್ಕೆ ಹೊಂದುತ್ತಾರೆ.

ಆದ್ದರಿಂದ ೧೪ನೇ ಶತಮಾನದ ಆದಿಯಲ್ಲಿ ಬಸದಿ ಗುಡಿಯಾಗಿ ಬದಲಾಗಿದೆ ಎಂದು ಸತರ್ಕ ಊಹೆ ಮಾಡಬಹುದು

ಒಂದು ಪ್ರತಿವಾದ:

ʼಶೈವ ಕಾಳಾಮುಖ ಮುನಿಗಳ ಶಿಷ್ಯರು ಕಂಬ ಮಾಡಿಸಿಕೊಟ್ಟರುʼ ಎಂದ ಮಾತ್ರಕ್ಕೆ ಅದಾಗಲೇ ಶೈವರು ಗುಡಿಯ ಮೇಲೆ ಹತೋಟಿ ಸಾಧಿಸಿದ್ದರು ಎಂದು ಹೇಳಬಹುದೇ ?

ಹೌದು, ಅದು ತಾರ್ಕಿಕವಾದ ಅನುಮಾನ. ಕಾಳಮುಖರು ಮತ್ತು ಜೈನರ ನಡುವೆ ಸೌಹಾರ್ಧಯುತ ಸಂಬಂಧಗಳ ಹಲವಾರು ಘಟನೆಗಳು ಶಾಸನಗಳಲ್ಲಿ ಸಿಗುತ್ತವೆ. ಈ ಮೊದಲು ಉಲ್ಲೇಖಿಸಿದ ಸವದತ್ತಿಯ ಕ್ರಿ.ಶ ೧೨೨೮ರ ಶಾಸನವೂ ಕೂಡ ಅಂತಹ ಉದಾಹರಣೆ ಒದಗಿಸುತ್ತದೆ. ಅದರಲ್ಲಿ ಸೌದತ್ತಿಯ ಮಲ್ಲಿಕಾರ್ಜುನ ಗುಡಿಗೆ ಮೇಲೆ ಹೇಳಿದ ಜೈನ ಮುನಿ ಪ್ರಭಾಚಂದ್ರ ಸಿದ್ಧಾಂತದೇವರುಗಳು ತಮ್ಮ ಶಿಷ್ಯರೊಂದಿಗೆ ಸೇರಿ ದಾನ ಮಾಡಿದ ಸಂಗತಿ ದಾಖಲಾಗಿದೆ. ಹೀಗಾಗಿ ಕಾಳಾಮುಖರು ತಮ್ಮ ಶಿಷ್ಯರಿಂದ ಜೈನ ಬಸದಿಗೆ ಕಂಬ ಮಾಡಿಸಿಕೊಟ್ಟಿರುವುದು ಅಸಂಭವವಲ್ಲ.

 

ಉಪಸಂಹಾರ:

ಹೂಲಿಯ ಪಂಚಲಿಂಗೇಶ್ವರ ಗುಡಿ ಮೂಲತಃ ಜೈನ ಬಸದಿಯಾಗಿತ್ತು ಎಂಬುದು ಅನುಮಾನಾತೀತ. ಬಸದಿ ಶೈವ ಗುಡಿಯಾಗಿ ೧೪ನೇ ಶತಮಾನದ ಆರಂಭದಲ್ಲಿ ಬದಲಾಗಿರಬಹುದು ಎಂದು ಊಹಿಸಬಹುದು, ನಿಖರವಾಗಿ ಹೇಳಲು ಸಧ್ಯ ಲಭ್ಯವಿರುವ ದಾಖಲೆಗಳಿಂದ ಸಾಧ್ಯವಿಲ್ಲ.



ಆಧಾರ ಸೂಚಿ:

[i] ARSIE 1940-41 ಶಾಸನ ಸಂ:25

[ii] ಕರ್ನಾಟಕ ಇನ್ಸ್‌ಕ್ರಿಪ್ಷನ್ಸ್‌ -೬, ಶಾಸನ ಸಂ : ೭೩

[iii] ʼಚಂದ್ರಕೊಡೆʼ - ಶ್ರೀ ಹಂಪ ನಾಗರಾಜಯ್ಯ, ಪುಟ-೨೫. ಲಿಂಕ್

[iv] ಶ್ರೀ ಪೂವಲ್ಲಿ ಸಿಂಹಾಸನ ಬೃಹನ್ಮಠದ ಸಂಕ್ಷಿಪ್ತ ಇತಿಹಾಸ – ಪುಟ-೩೨

Tuesday, 19 March 2024

Annual Reports on Indian Epigraphy (1939-44) ದಲ್ಲಿ ಹೂಲಿಯ ಶಾಸನಗಳು

 ಭಾರತೀಯ ಪುರಾತತ್ವ ಸರ್ವೇಕ್ಷಣ ಸಂಸ್ಥೆಯ ೧೯೩೯-೪೦ ಸಾಲಿನ ವಾರ್ಷಿಕ ವರದಿಯಲ್ಲಿ ಆ ವರ್ಷ ಪ್ರತಿಮಾಡಿದ  ಶಾಸನಗಳ ಪಟ್ಟಿ ಪ್ರಕಟವಾಗಿದೆ. ಸದರಿ ಪಟ್ಟಿಯಲ್ಲಿ ಶಾಸನ ಸಂ-೧೭ ರಿಂದ ಶಾಸನ ಸಂ-೫೦ ವರೆಗಿನ ಶಾಸನಗಳು ಹೂಲಿಯವು.


ಹೂಲಿಯ ಇತಿಹಾಸ ಆಸಕ್ತರಿಗಾಗಿ   "ARE ARSIE ARIE Annual Report On Epigraphy " ವರದಿಯ ಪುಟಗಳನ್ನು ಇಲ್ಲಿ ಪ್ರಕಟಿಸಲಾಗಿದೆ:






Saturday, 24 February 2024

ಶಾಸನ ಪದ್ಯಗಳಲ್ಲಿ ಹೂಲಿ – ಭಾಗ ೨

('ಆಕೃತಿ ಕನ್ನಡ' ಜಾಲ ಪತ್ರಿಕೆಯಲ್ಲಿ “ಹರನ ಕೊರಳ ಹೂಮಾಲೆ- ಹೂಲಿ" ಸರಣಿಯಲ್ಲಿ ಪ್ರಕಟವಾದ ಬರಹ)

ಪ್ರಾಚೀನ ಕಾಲದಲ್ಲಿ ವಿದ್ಯಾಕೇಂದ್ರ, ಆಡಳಿತ ಕೇಂದ್ರ, ಧಾರ್ಮಿಕ ಕೇಂದ್ರವಾಗಿದ್ದ ಹೂಲಿಯನ್ನು ಶಾಸನ ಪದ್ಯಗಳು ವರ್ಣಿಸಿರುವುದನ್ನು ವಿವರಿಸುವ ಈ ಬರಹದ ಮೊದಲ ಭಾಗ ಹಿಂದಿನ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಆ ಬರಹದಲ್ಲಿ ಹೂಲಿಯ ಮೂರು ಶಾಸನಗಳ ಪದ್ಯಗಳನ್ನಷ್ಟೇ ಚರ್ಚಿಸಿದ್ದೆವು. ಈ ಬರಹದಲ್ಲಿ ಮತ್ತೆ ನಾಲ್ಕು ಶಾಸನಗಳ ಪದ್ಯಗಳನ್ನು ಓದಿ,ಅರ್ಥೈಸಿ, ಆನಂದಿಸೋಣ.

ಈ ಭಾಗದಲ್ಲಿ ಕೂಡ ಪದ್ಯಗಳ ಪಠ್ಯ ಓರೆ ಅಕ್ಷರಗಳಲ್ಲಿದೆ, ಉಳಿದ ಬರಹ ನೇರ ಅಕ್ಷರಗಳಲ್ಲಿದೆ.  ಬಹುತೇಕ ಕಠಿಣಪದಗಳ ಅರ್ಥಗಳನ್ನು ಭಾವಾನುವಾದದಲ್ಲಿಯೇ ವಿವರಿಸಲಾಗಿದೆ – ಉಳಿದ ಪದಗಳ ಅರ್ಥವನ್ನು ಬರಹದ ಕೊನೆಗೆ ಪಟ್ಟಿಯಲ್ಲಿ ಕೊಡಲಾಗಿದೆ.

 

ಕ್ರಿ.ಶ. ೧೧೦೪ರ ಶಾಸನ (ಇಐ ೧೮ -೨೨/ಇ)

ಕಲ್ಯಾಣ ಚಾಲುಕ್ಯರ ದೊರೆಯಾದ ತ್ರಿಭುವನಮಲ್ಲನ ಪ್ರಧಾನನಾಗಿದ್ದ ಅಂತರಸನ ಆಜ್ಞೆಯಂತೆ ಸಿಂಗರಸನು ಅಂಧಾಸುರದೇವರಿಗೆ ದತ್ತಿಬಿಟ್ಟ ವಿಷಯವಿರುವ ಈ ಶಾಸನಕಲ್ಲು ಮೊದಲು ಅಂಧಕೇಶ್ವರ ಗುಡಿಯ ಹತ್ತಿರವಿದ್ದುದನ್ನು ಈಗ ಪಂಚಲಿಂಗೇಶ್ವರ ಗುಡಿಯಲ್ಲಿನ ಸಂಗ್ರಹಾಲಯದಲ್ಲಿ ಇಡಲಾಗಿದೆ.  ಈ ಶಾಸನದಲ್ಲಿ ಕಾಳಾಮುಖ ಸಂಪ್ರದಾಯದ ಗುರುಗಳನ್ನು ಹೊಗಳಿ, ಹೂಲಿಯನ್ನೂ, ಹೂಲಿಯ ಮಹಾಜನರನ್ನೂ ಕಾವ್ಯಗಳಲ್ಲಿ ಹೊಗಳಲಾಗಿದೆ.



 

ಪದ್ಯ೧: 

ಚಂಪಕಮಾಲಾ ವೃತ್ತದಲ್ಲಿರುವ ಈ ಪದ್ಯ ಹೂಲಿಯನ್ನು ವರ್ಣಿಸುತ್ತದೆ:


ವನಧಿ ಪರೀತ ಭೂತಳ ವಿಳಾಸವತೀ ಮುಖದಂತೆ ತೋರ್ಪ ಚೆ

ಲ್ವಿನ ಕಣಿ ಬೆಳ್ವಲಕ್ಕೆ ತಿಲಕಾಕೃತಿಯಿಂದೆಸೆದಿರ್ಪ ಪೂಲಿಯೇ

ನನಿಮಿಷರಾಜನಿರ್ಪ ಪುರವೋ ಫಣಿರಾಜನ ರಾಜಧಾನಿಯೋ

ಮನುಜನಿವಾಸಮಲ್ಲದೆನಿಸಲ್ ನೆರೆಗುಂ ಪೆರೆತೊಂದು ಶೋಭೆಯಿಂ

 

ʼವನಧಿʼ ಎಂದರೆ ಸಾಗರ, ʼವಿಳಾಸವತಿʼ ಎಂದರೆ ಸುಂದರಿ, ʼಅನಿಮಿಷʼ ಎಂದರೆ ಕಾಲಾತೀತರಾದವರು, ದೇವತೆಗಳು ಎಂದರ್ಥ. ʼಅನಿಮಿಷರಾಜʼ ಎಂದರೆ ದೇವತೆಗಳ ರಾಜ – ಇಂದ್ರ.

 

ಪದ್ಯದ ಅರ್ಥ : “ಸಾಗರವನ್ನು ಉಟ್ಟ ಸುಂದರಿ ಭೂಮಿಗೆ ಮೊಗದಂತೆ ತೋರುವ ಚಲುವಿನ ಕಣಿ ಬೆಳ್ವಲ. ಆ ಮೊಗದಲ್ಲಿ ತಿಲಕದಂತೆ ಹೊಳೆಯುವುದೇ ಹೂಲಿ. ಈ ಹೂಲಿಗೆ ʼಇದು ದೇವತೆಗಳ ರಾಜ ಇಂದ್ರ ವಾಸಿಸುವ ಇಂದ್ರಪುರಿಯೋ ಅಥವಾ ನಾಗರಾಜನ ರಾಜಧಾನಿಯೋ? ಮನುಷ್ಯಮಾತ್ರರು ವಾಸಿಸುವ ಸ್ಥಳ ಇದಲ್ಲವೇ ಅಲ್ಲʼ ಎನಿಸುವಷ್ಟು ಶೋಭೆಯಿದೆ..

 

ಪದ್ಯ೨:

ಕಂದ ಛಂದದಲ್ಲಿರುವ ಈ ಪದ್ಯ ಹೂಲಿಯನ್ನು ವೇದಗಳ ತವರೂರು ಎಂದು ವರ್ಣಿಸಿದೆ:

ಅದು ವೇದಂಗಳ ತಾಯ್ವನೆ 

ಯದು ನಾನಾ ತರ್ಕದಿರ್ಕೆದಾಣಂ ಕೇಳಂ

ತದು ಶಾಸ್ತ್ರಂಗಳ ಕಣಿಯೆನಿ

ಸಿದುದವನೀಚಕ್ರದೊಳಗೆ ಪೂಲಿಗ್ರಾಮಂ

ʼಅವನೀʼ ಎಂದರೆ ಭೂಮಿ.  ʼಅವನೀಚಕ್ರʼ ಎಂದರೆ ಭೂಮಂಡಲ.

ಪದ್ಯದ ಅರ್ಥ : “ಈ ಪೂಲಿಗ್ರಾಮವು ವೇದಗಳ  ತವರುಮನೆ, ಇದು ವಿವಿಧ ತರ್ಕ ವಿಭಾಗಗಳ ತಾಣ, ಕೇಳಿಲ್ಲಿ, ಇದು ಶಾಸ್ತ್ರಂಗಳ ಗಣಿಯಂದು ಭೂಮಂಡಲದಲ್ಲಿ ಹೆಸರುವಾಸಿಯಾಗಿದೆ.”

 

ಪದ್ಯ೩:

ಮುಂದಿನ ಪದ್ಯವೂ ಕಂದ ಛಂದದಲ್ಲಿದೆ. ಅದು ಹೂಲಿಯ ಪರಿಸರವನ್ನು ವರ್ಣಿಸಿದೆ:

ಆರಮೆ ಣ್ತೆರೆಗಿದ ಸಹ

ಕಾರಮೆ ಭೋರೆಂದು ಮೊರೆಯುತಿರ್ಪಳನೀ ಝಂ

ಕಾರಮೆ ಸುಗಂಧ ಕುಸುಮಾ

ಸಾರಮೆ ಪೊರವೋಲೊಳೆಂದೊಡೇವಣ್ಣಿಪುದೋ

ʼಆರಮೆʼ ಎಂದರೆ ಉದ್ಯಾನ, ʼಪಣ್ತೆರೆಗಿದ ಸಹಕಾರʼ ಎಂದರೆ ಹಣ್ಣಾದ ಮಾವಿನ ಹಣ್ಣು. ʼಅಳಿನಿʼ ಎಂದರೆ ಜೇನ್ನೊಣ.

ಪದ್ಯದ ಅರ್ಥ : “ಉದ್ಯಾನಗಳೋ, ಮರಗಳಲ್ಲಿ ತುಂಬಿ ತೂಗುತ್ತಿರುವ ಮಾವಿನ ಹಣ್ಣುಗಳೋ, ಭೋರೆಂದು ಮೊರೆಯುತಿರುವ ಜೇನ್ನೊಣಗಳ ಝೇಂಕಾರವೋ, ಈ ಊರನ್ನು ಸುತ್ತುವರೆದಿರವ ಹೂವುಗಳ ಸುಗಂಧಯುಕ್ತ ಪರಿಮಳವೋ, ಹೇಗೆ ಬಣ್ಣಿಸುವುದು ?”

ಪದ್ಯ೪:

ಈ ಪದ್ಯ ಚಂಪಕಮಾಲಾ ವೃತ್ತದಲ್ಲಿದೆ. ಇದರಲ್ಲಿ ಹೂಲಿಯ ಗುಡಿಯ ಗೋಪುರ-ಕಳಶಗಳನ್ನು ವರ್ಣಿಸಿದೆ:

ಸುರನಿಲಯಂಗಳೀಶನ ದಿನೇಶನ ಪಾದ ಯುಗಕ್ಕೆ ಭಕ್ತರ

ಪ್ಪರನವರಿರ್ಪ ಶಾಶ್ವತಪದಕ್ಕಡರ್ದೇರೆಸಲೆಂದು ಸಾರಮಾ

ಗಿರೆ ಬಿದಿ ಕಟ್ಟಿದೊಂದು ಪಥಮೆಂಬವೊಲಂಬರಮಂ ತರುಂಬಿ ಭಾ

ಸುರತರ ಶಾತಕುಂಭ ಕಳಶಂಗಳಿನೊಪ್ಪುಗುಮೆಂತು ನೋಳ್ಪೊಡಂ

ʼಸುರನಿಲಯʼ ಎಂದರೆ ದೇವಸ್ಥಾನ,  ʼಪಾದಯುಗʼ ಎಂದರೆ ಜೋಡಿಪಾದಗಳು, ʼಸಾರʼ ಎಂದರೆ ಇಲ್ಲಿ ಮೆಟ್ಟಿಲು, ʼಬಿದಿʼ ಎಂದರೆ ಬ್ರಹ್ಮ, ಸೃಷ್ಟಿಕರ್ತ. ʼಶಾತಕುಂಭʼ ಎಂದರೆ ಬಂಗಾರ.


ಪದ್ಯದ ಅರ್ಥ : “ಈಶ-ದಿನೇಶರ ಪಾದಗಳಿಂದ ಭಕ್ತರನು ಶಾಶ್ವತಪದಕ್ಕೆ ಏರಿಸೆಲೆಂದು ಮೆಟ್ಟಿಲುಗಳಾಗಲಿ ಎಂದು ಸೃಷ್ಟಿಕರ್ತ ಕಟ್ಟಿದ ಪಥವೋ ಎನಿಸುವಂತೆ ಮುಗಿಲು ಮರೆಮಾಡುವ ದೇವಾಲಯಗಳ ಪ್ರಕಾಶಮಾನವಾದ ಬಂಗಾರದ ಕಳಶಗಳು ಕಾಣಿಸುತ್ತವೆ.” 

 

ಪದ್ಯ೫:

ಕಂದ ಛಂದಸ್ಸಿನಲ್ಲಿರುವ ಈ ಪದ್ಯ ಹೂಲಿಯ ವಾತಾವರಣವನ್ನು ವರ್ಣಿಸುತ್ತದೆ:

ಅಖಿಳ ಮಹೀದೇವ‌ರ್ ಶತ

ಮಖನಂ ತಣಿಪಲ್ಕೆ ಕೂಡೆ ಮಾಡುತ್ತಿರೆ ಕಾ

ರ್ಮುದವೊಲೆಸೆಗುಂ ನಾನಾ

ಮಖಧೂಮಸ್ತೋಮದಿಂದಮೆಂದುಂ ವ್ಯೋಮಂ ||

ಮಖ ಎಂದರೆ ಯಜ್ಞ. ʼಶತಮಖʼ ಎಂದರೆ ನೂರು ಯಜ್ಞಗಳನ್ನು ಮಾಡಿದವನು- ಇಂದ್ರ; ‘ಕಾರ್ಮುಕ’ ಎಂದರೆ ಮಳೆಗಾಲದ ಆರಂಭ, ʼಮಹೀʼ ಎಂದರೆ ಭೂಮಿ, ʼಮಹೀದೇವ‌ರುʼ ಎಂದರೆ ಭೂಸುರರು,ಬ್ರಾಹ್ಮಣರು. 

ಈ ಪದ್ಯದ ಅರ್ಥ : “ಇಂದ್ರ ಸಂತೃಪ್ತಿಗಾಗಿ ಬ್ರಾಹ್ಮಣರೆಲ್ಲರೂ ಒಟ್ಟಾಗಿ ಮಾಡುವ ವಿವಿಧ ಯಜ್ಞಗಳ ಹೊಗೆಯಿಂದಾಗಿ ಮುಗಿಲು ಮಳೆಗಾಲದ ಆರಂಭದಲ್ಲಿ ಮೂಡುವ ಕಾಮನಬಿಲ್ಲಿನಂತೆ ಬೆಳಗುತ್ತಿರುತ್ತದೆ.”

 

ಪದ್ಯ೬:

ಮತ್ತೇಭವಿಕ್ರೀಡಿತ  ವೃತ್ತದಲ್ಲಿರುವ ಈ ಪದ್ಯ ಹೂಲಿಯ ಸಾವಿರ ಮಹಾಜನರನ್ನು ವರ್ಣಿಸುತ್ತದೆ:

 ವಿಪುಳಾಚಾರರಗಣ್ಯಪುಣ್ಯನಿಳಯ‌ರ್ ಲೋಕೈಕಪೂಜ್ಯರ್ ಕಳಾ 

ನಿಪುಣ‌ರ್ ಶಾರದ ನೀರದೋಪಮಯಶ‌ರ್ ಶಿಷ್ಟೇಷ್ಟವರ್ಗಾಮರಾಂ

ಘ್ರಿಪರುದ್ವೃತ್ತವಿರೋಧಿಸಾಧನಹರ‌ರ್ ಶ್ರೀ ಕೇಶವಾದಿತ್ಯ ದೇ 

ವಪದಾಂಭೋರುಹ ಭೃಂಗರೆಂದು ಪೊಗಳ್ದುಂ ಸಾಸಿರ್ವರಂ ಭೂತಳಂ

 

ʼಶಾರದʼ ಎಂದರೆ ಇಲ್ಲಿ ಶರತ ಋತುವಿನ ಎಂದು ಅರ್ಥ, ʼನೀರದʼ ಎಂದರೆ ಮೋಡ.ʼಶಾರದ ನೀರದʼ ಎಂದರೆ ಶರತ ಋತುವಿನ ಮಳೆ ಹೊತ್ತು ತರುವ ಮೋಡಗಳು ಎಂದು ಅರ್ಥ. ʼಅಂಘ್ರಿʼ ಎಂದರೆ ಪಾದ, ʼಅಂಘ್ರಿಪʼ ಎಂದರೆ ಪಾದದಿಂದ ನೀರು ಕುಡಿಯುವಂತಹದು – ಮರ (ʼಪಾದಪʼ ಎಂದರೂ ಮರ), ʼಅಮರಾಂಘ್ರಿಪʼ ಎಂದರೆ ದೇವಲೋಕದ ಮರ, ಕಲ್ಪವೃಕ್ಷ.

 

ಪದ್ಯದ ಅರ್ಥ : “ಹೂಲಿಯ ಸಾವಿರ ಮಹಾಜನಗಳು ವಿಪುಲ ಸನ್ನಡತೆಯ ವ್ಯಕ್ತಿಗಳು,  ಅಗಣಿತ ಪುಣ್ಯ ಹೊಂದಿರುವವರು, ಲೋಕಪೂಜ್ಯರು, ಕಲೆಗಳಲ್ಲಿ ನಿಪುಣರು, ಶರತ ಋತುವಿನ ಮಳೆತರುವ ಮೋಡಗಳಂತಹ ಖ್ಯಾತಿಯನ್ನು ಹೊಂದಿರುವವರು, ಶಿಷ್ಟರಿಗೆ ಕಲ್ಪವೃಕ್ಷಗಳಂತವರು, ಸೊಕ್ಕಿದ ವಿರೋಧಿಗಳ ಸಾಧನಹರರು, ಶ್ರೀ ಕೇಶವಾದಿತ್ಯ ಪಾದಕಮಲಕ್ಕೆ ಭೃಂಗನಂತವರು ಎಂದು ಲೋಕವೆಲ್ಲ ಹೊಗುಳುತ್ತದೆ.”

 

ಕ್ರಿ.ಶ. ೧೧೦೭ರ ಶಾಸನ ( ಇಐ ೧೮ -೨೨/ಎಫ್)

‌ಕೆರೆ ಸಿದ್ದೇಶ್ವರ ಗುಡಿಯಲ್ಲಿರುವ ಕಲ್ಯಾಣದ ಚಾಲುಕ್ಯರ ದೊರೆಯಾದ ತ್ರಿಭುವನಮಲ್ಲ(ವಿಕ್ರಮಾದಿತ್ಯ-೪)ನ ಆಳ್ವಿಕೆಯಲ್ಲಿ ಹೂಲಿಯ ಭಾಗವಾದ ಕಳಶವಳ್ಳಿಗೇರಿಯ ನೂರು ಮಹಾಜನರು ಕೇದಾರೇಶ್ವರ ದೇವರಿಗೆ ದತ್ತಿ ಬಿಟ್ಟದ್ದನ್ನು ದಾಖಲಿಸುತ್ತದೆ. ಈ ಶಾಸನದಲ್ಲಿ ಹೂಲಿಯ ಸಾವಿರ ಮಹಾಜನರನ್ನು ಮತ್ತು ಕಳಶವಳ್ಳಿಗೇರಿಯ ನೂರು ಮಹಾಜನರನ್ನು ವರ್ಣಿಸುವ ಪದ್ಯಗಳಿವೆ.

 



ಪದ್ಯ೧:

ಮತ್ತೇಭವಿಕ್ರೀಡಿತ  ವೃತ್ತದಲ್ಲಿರುವ ಈ ಪದ್ಯ ಹೂಲಿಯ ಸಾವಿರ ಮಹಾಜನರನ್ನು ವರ್ಣಿಸುತ್ತದೆ:

ಭುವನ ಪ್ರಸ್ತುತರೇಕ ವಾಕ್ಯರಚಳ‌ರ್ ಶ್ರೀ ಕೇಶವಾದಿತ್ಯ ದೇ

ವವರಪ್ರಾಪ್ತ ಸಮಸ್ತ ಸಂಪದರಶೇಷಾಶಾಸಮಾಕೀರ್ಣ

ರ್ಣವಿಲಾಸ‌ರ್ ಚತುರರ್ ಚತುಸ್ಸಮಯಸಂಸೇವ್ಯ‌ರ್ ಚತುರ್ವೇದಶಾ

ಸ್ತ್ರವಿಚಾರಕ್ಷಮರೆಂದೊಡೇವೊಗಳ್ವುದೋ ಸಾಸಿರ್ವರ ಖ್ಯಾತಿಯಂ !!

 

ಪ್ರಸ್ತುತ’ ಎನ್ನುವುದು ʼಹೊಗಳಲ್ಪಟ್ಟʼ ಎಂಬ ಅರ್ಥದ ಗುಣವಾಚಕ. ʼಏಕ ವಾಕ್ಯರ್‌ ಅಚಳರ್ʼ ಎಂದರೆ ಒಂದೇ ಮಾತಿನವರು, ಮಾತು ಬದಲಿಸದ ಅಚಲರು ಎಂದು ಅರ್ಥ.

ʼಅಶೇಷʼ ಎಂದರೆ ʼಎಲ್ಲವನ್ನು ಒಳಗೊಂಡʼ, ʼಸಮಸ್ತʼ ಎಂದು ಅರ್ಥ. ʼಆಶಾʼ ಎಂದರೆ ದಿಕ್ಕು. ʼಸಮಾಕೀರ್ಣʼ ಎಂದರೆ ತುಂಬಿದುದು. ʼವರ್ಣವಿಳಾಸʼ ಎಂದರೆ ಶಬ್ದಸೌಂದರ್ಯ.

ʼಚತುಸ್ಸಮಯʼ ಎಂದರೆ ಬೌದ್ಧ, ಜೈನ, ವೈಷ್ಣವ ಹಾಗೂ ಶೈವ  ಎಂಬ ನಾಲ್ಕು ಮತಗಳು. ʼಸಂಸೇವ್ಯ‌ʼರು ಎಂದರೆ ಪೂಜ್ಯರು.

 

ಪದ್ಯದ ಒಟ್ಟಾರೆ ಅರ್ಥವನ್ನು ಹೀಗೆ ಹೇಳಬಹುದು : “ಹೂಲಿಯ ಸಾವಿರ ಮಹಾಜನರು ಪ್ರಪಂಚದಾದ್ಯಂತ ಹೊಗಳಲ್ಪಟ್ಟವರು, ಮಾತು ಬದಲಿಸದ ಅಚಲರು, ಶ್ರೀ ಕೇಶವಾದಿತ್ಯ ದೇವರ ವರದಿಂದ ಸಕಲ ಸೌಭಾಗ್ಯವನ್ನು ಪಡೆದವರು, ಎಲ್ಲ ದಿಕ್ಕುಗಳನ್ನು ತಮ್ಮ ಶಬ್ದಸೌಂದರ್ಯದಿಂದ ತುಂಬ ಬಲ್ಲವರು, ಚತುರರು, ಚತುರ್ವೇದ-ಶಾಸ್ತ್ರಗಳಲ್ಲಿ ಗಟ್ಟಿಗರು,  ಅವರ ಖ್ಯಾತಿಯನ್ನು ಹೇಗೆ ಹೊಗಳುವುದು?”

 

ಪದ್ಯ೨:

ಹೂಲಿಯ ಓಣಿಯಾದ ಕಳಶವಳ್ಳಿಗೇರಿಯ ನೂರು ಮಹಾಜನರನ್ನು ಈ ಕಂದ ಪದ್ಯ ವರ್ಣಿಸುತ್ತದೆ.

ವಿದಿತ ಶ್ರೀ ಪೂಲೀಪುರ

ವದನಾಲೋಕನ ಸುದರ್ಪಣ‌ರ್ ತಾವೆನಿಪ‌ರ್

ಸದಮಳ ಚರಿತ‌ರ್ ಗುಣಗಣ

ಸದನರೆನಲ್‌ ಕಳಶವಳ್ಳಿಗೇರಿಯ ನೂರ್ವ‌ರ್

ʼವಿದಿತʼ ಎಂದರೆ ಪ್ರಸಿದ್ಧವಾದ ಎಂದಂತೆ. ʼವದನʼ ಎಂದರೆ ಮುಖ, ʼವದನಾಲೋಕನʼ ಎಂದರೆ ಮುಖ ನೋಡಿಕೊಳ್ಳಲು ಎಂದು ಅರ್ಥ.

ಪದ್ಯದ ಅರ್ಥ : “ಶ್ರೀ ಪೂಲೀಪುರಕ್ಕೆ ಮುಖನೋಡುವ ಚಲುವಗನ್ನಡಿಯಂದೆನಿವವ  ಕಳಶವಳ್ಳಿಗೇರಿಯ ನೂರು ಮಹಾಜನರು ಕಳಂಕರಹಿತ ಚಾರಿತ್ರ ಹೊಂದಿರುವವರು, ಗುಣಗಣಗಳಿಗೆ ನೆಲೆಯಾದವರು”.

 

ಕ್ರಿ.ಶ.೧೧೬೨ರ ಶಾಸನ ( ಇಐ ೧೮ -೨೨/ಎಲ್)

ಮೂಲತಃ ವಿರಕ್ತಮಠದ ಹತ್ತಿರ ಇದ್ದ ಈ ಶಾಸನಕಲ್ಲನ್ನು ಈಗ ಪಂಚಲಿಂಗಪ್ಪನ ಗುಡಿಯ ಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಇದರಲ್ಲಿ ಕಳಚುರ್ಯ ರಾಜನಾದ ತ್ರಿಭುವನಮಲ್ಲದೇವನ (ಬಿಜ್ಜಳನ) ಆಳಿಕೆಯಲ್ಲಿ ಪೆರ್ಗಡೆ ದಾಸಿರಾಜನು ನಾಗರಖಂಡಿಯ ಕೇಶವ ದೇವಸ್ಥಾ ನವನ್ನು ಜೀರ್ಣೋದ್ಧಾರ ಮಾಡಿ ಭೂಮಿಯನ್ನು ಕೊಂಡು ದತ್ತಿ ಬಿಟ್ಟಿದ್ದನ್ನು ದಾಖಲಿಸಿದೆ.

ಶಾಸನದಲ್ಲಿ ಭಾರದ್ವಾಜ ಗೋತ್ರದ ದಾಸಿರಾಜನ ವಂಶಾವಳಿಯನ್ನು ಹೇಳುವುದಕ್ಕಿಂತ ಮೊದಲು, ಹೂಲಿಯನ್ನು, ಹೂಲಿಯ ಸಾವಿರ ಮಹಾಜನರನ್ನು, ಹೂಲಿಯ ಒಂದು ಭಾಗವಾಗಿದ್ದ ಶಿವೆಯಗೇರಿಯ ನೂರು ಮಹಾಜನರನ್ನು ಪದ್ಯಗಳಲ್ಲಿ ವರ್ಣಿಸುತ್ತದೆ.



ಪದ್ಯ ೧:

ಈ ಪದ್ಯ ಹೂಲಿಯನ್ನು ಶಾರ್ದೂಲ ವಿಕ್ರೀಡಿತ ವೃತ್ತದಲ್ಲಿ ವರ್ಣಿಸುತ್ತದೆ.

ರಾಮಾರಾಮ ವಿಕೀರ್ಣದಿಂ ನಿಖಿಲ ದೇವಾನೀಕದಿಂ ಋಗ್ಯಜು

ಸ್ಸಾಮಾಥರ್ವಣ ವೇದ ಶಾಸ್ತ್ರವಿದಿತ ವ್ಯಾಪಾರ ಚಾತುರ್ಯದಿಂ

ಶ್ರೀಮತ್ಕೊಟ್ಟಜವಾವಿಯಿಂ ಕೆರೆಗಳಿಂ ಕಾಂತಾ ಜನಾನೀಕದಿಂ

ದೇಮಾತೋ ಸಲೆ ಪೂಲಿ ಲೀಲೆವಡೆಗುಂ ಪೂದೋಂಟದೊಂದೋಳಿಯಿಂ ||

 

ʼರಾಮʼ ಎಂದರೆ ಮನೋಹರವಾದು̧ದು ಎಂದೂ ಕೂಡ ಅರ್ಥ. ‘ಆರಾಮ’ ಎಂದರೆ ಸುಖ. ʼವಿಕೀರ್ಣʼ ಎಂದರೆ ತುಂಬಿದ ಎಂದರ್ಥ. ‘ನಿಖಿಲ’ ಎಂದರೆ ಸಮಸ್ತ ಎಂದರ್ಥ. ʼಅನೀಕʼ ಎಂದರೆ ಗುಂಪು. ‘ಏಮಾತೂʼ ಎಂದರೆ ʼಏನು ಮಾತುʼ ಎಂದರ್ಥ.

 

‘ಕೊಟ್ಟಜ’ ಎಂದರೆ ಕಪ್ಪ-ಕಾಣಿಕೆ. ʼವಾವಿʼ ಎಂದರೆ ಬಾವಿ. ʼಶ್ರೀಮತ್‌ ಕೊಟ್ಟಜ ವಾವಿʼ ಎಂದರೆ ಕಪ್ಪದ ರೂಪವಾಗಿ ಯಾರಾದರು ತೋಡಿಸಿ ಕೊಟ್ಟ ಬಾವಿ ಎಂದು ಊಹಿಸಬಹುದು.

 

ಪದ್ಯದ ಅರ್ಥವನ್ನು ಹೀಗೆ ಹೇಳಬಹುದು – “ಮನೋಹರವಾದ ಸುಖದಿಂದ ತುಂಬಿ, ದೇವಗಣಗಳಿಂದ, ಚತುರ್ವೇದ ಪರಿಣಿತರಿಂದ, ಬಾವಿ-ಕೆರೆ, ಸುಂದರಿಯರ ಮಾತಂತೂ ಹೇಳೋದೇ ಬೇಡ, ಹೂದೋಟಗಳ ಸಾಲುಗಳಿಂದ ಹೂಲಿಯ ಲೀಲೆ ತೋರಿಸುತ್ತಿತ್ತು.”

 

ಪದ್ಯ ೨:

ಮತ್ತೇಭವಿಕ್ರೀಡಿತ ವೃತ್ತದಲ್ಲಿರುವ ಈ ಪದ್ಯ ಹೂಲಿಯ ಸಾವಿರ ಮಹಾಜನರನ್ನು ವರ್ಣಿಸುತ್ತದೆ:

ಇನನಂ ತೇಜದೊಳಿಂದ್ರನಂ ವಿಭವದೊಳ್ ಚಾಣಕ್ಯನಂ ನೀತಿಯೊಳ್

ಮನುವಂ ಚಾರುಚರಿತ್ರದೊಳ್ ಜಳಧಿಯಂ ಗಾಂಭೀರ್ಯದೊಳ್ ಧೈರ್ಯದೊಳ್

ಕನಕಾದ್ರೀಂದ್ರಮನೆಯ್ದೆ ಪೋಲ್ಪರೆನಿಪೀ ಸಾಸಿರ್ವರಂ ಖ್ಯಾತಿಯೊಳ್

ಮನುಜರ್ಕಳ್ ಪಡಿಪಾಟಿ ಪಾಸಟಿ ಸಮಂ ಬರ್ಪನ್ನರಾರ್ ಧಾತ್ರಿಯೊಳ್‌ ||

ʼಇನʼ ಎಂದರೆ ಸೂರ್ಯ.  ʼವಿಭವʼ ಎಂದರೆ ಘನತೆ, ಚಾರುಚರಿತ್ರ ಎಂದರೆ ಸಚ್ಚಾರಿತ್ರ, ಒಳ್ಳೆಯ ನಡತೆ. ʼಧೈರ್ಯʼ ಎಂದರೆ ಇಲ್ಲಿ  ದೃಢತೆ, ನಿಶ್ಚಲತೆ

ಪದ್ಯದ ಅರ್ಥ : “ತೇಜಸ್ಸಿನಲ್ಲಿ ಸೂರ್ಯನನ್ನು, ಘನತೆಯಲ್ಲಿ ಇಂದ್ರನನ್ನು, ನೀತಿಯಲ್ಲಿ ಚಾಣಕ್ಯನನ್ನು, ಸಚ್ಚಾರಿತ್ರದಲ್ಲಿ ಮನುವನ್ನು, ಗಾಂಭೀರ್ಯದೊಳಗೆ ಸಾಗರವನ್ನು, ದೃಢತೆಯೊಳಗೆ ಕನಕಾದ್ರಿಯನ್ನು ಹೋಲುವ ಹೂಲಿಯ ಸಾವಿರ ಮಹಾಜನರ ಖ್ಯಾತಿಗೆ ಮನುಷ್ಯರಲ್ಲಿ ಸರಿಸಾಟಿಯಾಗಿ ಬರುವಂತವರು ಭೂಮಿಯಲ್ಲಿ ಯಾರಿದ್ದಾರೆ ?”

 

ಪದ್ಯ ೩:

ಹೂಲಿಯ ಓಣಿ ಶಿವೆಯಗೇರಿಯ ನೂರು ಮಹಾಜನರನ್ನು ವರ್ಣಿಸುವ ಈ ಪದ್ಯದ ಛಂದಸ್ಸು- ಕಂದಪದ್ಯ.

ಒರ್ವೊವ್ರರ್ ಪರಿಭಾವಿಸೆ

ಸರ್ವಜ್ಞ‌ರ್ ನೆಗಳ್ದ ವೇದಶಾಸ್ತ್ರಂಗಳೊಳೆಂ

ದುರ್ವೀತಳಮಭಿವರ್ಣಿಸೆ

ನೂರ್ವರ್ ಶ್ರೀ ಶಿವೆಯಗೇರಿಯೊಳ್ ಕರಮೆಸೆದ‌

ʼನೆಗಳ್ದʼ ಎಂದರೆ ಪ್ರಸಿದ್ಧವಾದ, ʼಉರ್ವಿತಳʼ ಎಂದರೆ ಭೂತಳ, ಜಗತ್ತು.

ಪದ್ಯದ ಅರ್ಥ: “ʼಒಬ್ಬಬ್ಬರನ್ನೂ ವೇದಶಾಸ್ತ್ರಗಳಲ್ಲಿ ಸರ್ವಜ್ಞರು ಎಂದು ಭಾವಿಸಬಹುದುʼ ಎಂದು ಜಗತ್ತೇ ಹೊಗಳುತ್ತಿದ್ದ ನೂರು ಮಹಾಜನರು ಶಿವೆಯಗೇರಿಯಲ್ಲಿ ಶೋಭಿಸುತ್ತಿದ್ದರು.”

 

ಕ್ರಿ.ಶ.೧೧೬೨ರ ಶಾಸನ ( ಇಐ ೧೮ -೨೨/ಎಮ್)

ಅಗಸ್ತೇಶ್ವರ ಗುಡಿಯ ಗೋಡೆಯಲ್ಲಿ ಅಳವಡಿಸಿರುವ ಈ ಶಾಸನ ಹಿಂದಿನ ಶಾಸನಕ್ಕೆ ಸಮಕಾಲೀನವಾದದ್ದು. ಇದರಲ್ಲಿಯೂ ಕೂಡ ಕಳಚುರ್ಯ ರಾಜನಾದ ತ್ರಿಭುವನಮಲ್ಲದೇವನ (ಬಿಜ್ಜಳನ) ಆಳಿಕೆಯಲ್ಲಿ ಪೆರ್ಗಡೆ ದಾಸಿರಾಜ ಅಗಸ್ತೇಶ್ವರ ಗುಡಿ ಮತ್ತು ಅದರ ಪಕ್ಕದ ನಾಗರಭಾವಿಯ ನಿರ್ವಹಣೆಗಾಗಿ ದತ್ತಿ ಬಿಟ್ಟ ವಿಷಯವಿದೆ.

ಶಾಸನದಲ್ಲಿ ಭಾರದ್ವಾಜ ಗೋತ್ರದ ದಾಸಿರಾಜನ ವಂಶಾವಳಿಯನ್ನು ಹೇಳುವುದಕ್ಕಿಂತ ಮೊದಲು – ಹಿಂದಿನ ಶಾಸನಕ್ಕಿಂತ ಈ ಶಾಸನದಲ್ಲಿ ಹೆಚ್ಚಿನ ವಿವರಗಳಿವೆ - ಹೂಲಿಯನ್ನು, ಹೂಲಿಯ ಸಾವಿರ ಮಹಾಜನರನ್ನು, ಹೂಲಿಯ ಒಂದು ಭಾಗವಾಗಿದ್ದ ಶಿವೆಯಗೇರಿಯ ನೂರು ಮಹಾಜನರನ್ನು ಪದ್ಯಗಳಲ್ಲಿ ವರ್ಣಿಸುತ್ತದೆ.

 


 

ಪದ್ಯ ೧:

ಶಾರ್ದೂಲ ವಿಕ್ರೀಡಿತ ವೃತ್ತದಲ್ಲಿರುವ ಈ ಪದ್ಯ ಹೂಲಿಯನ್ನು ವರ್ಣಿಸುತ್ತದೆ. ಇದರ ಮೊದಲ ಎರಡು ಸಾಲುಗಳು ಹಿಂದಿನ ಶಾಸನದ ಮೊದಲ ಪದ್ಯದಂತೆಯೇ ಇವೆ.

ರಾಮಾರಾಮ ವಿಕೀರ್ಣದಿಂ ನಿಖಿಲ ದೇವಾನೀಕದಿಂ ಋಗ್ಯಜು 

ಸ್ಸಾಮಾಥರ್ವಣವೇದಶಾಸ್ತ್ರನಿವಹ ಪ್ರಖ್ಯಾತ ಸಾಸಿರ್ವರಿಂ

ಕಾಮೋದ್ದಾಮ ಗಜಂಗಳಂತಿರೆಸೆವಾ ವಾರಾಂಗನಾನೀಕದಿಂ

ಶ್ರೀಮತ್ಪೂಲಿ ನಿರಂತರಂ ಸೊಗಯಿಕುಂ ಸತ್ಸೇವ್ಯ ಸಂಪತ್ತಿಯಿಂ

 

ʼಸೊಗಯಿಸುʼ ಎಂದರೆ ಶೋಭಿಸು. ʼಸೇವ್ಯʼ ಎಂದರೆ ಪೂಜ್ಯ.

 

ಪದ್ಯದ ಅರ್ಥವನ್ನು ಹೀಗೆ ಹೇಳಬಹುದು – “ಮನೋಹರವಾದ ಸುಖದಿಂದ ತುಂಬಿ, ದೇವಗಣಗಳಿಂದ, ಚತುರ್ವೇದ ಪರಿಣಿತರಿಂದ, ಕಾಮನ ಮದ್ದಾನೆಗಳಂತಿರುವ ವಾರಾಂಗನೆಯರ ಗುಂಪಿನಿಂದ, ಪೂಜ್ಯ ಸಂಪತ್ತಿನಿಂದ ಶ್ರೀಮತ್‌ ಪೂಲಿ ನಿರಂತರವಾಗಿ ಶೋಭಿಸುತ್ತಿತ್ತು.”

 

 

ಪದ್ಯ ೨:

ಶಾರ್ದೂಲ ವಿಕ್ರೀಡಿತ ವೃತ್ತದಲ್ಲಿ ಹೂಲಿಯ ಸಾವಿರ ಮಹಾಜನರನ್ನು ಈ ಪದ್ಯ ವರ್ಣಿಸುತ್ತದೆ.

ಶ್ರೀ ರಾಮಾಯಣ ಭಾರತಾದಿ ಮನು ಚಾರಿತ್ರಂಗಳ ವ್ಯಾಪ್ತಿಯೊಳ

ಸಾರಾಸಾರ ವಿಚಾರ ತರ್ಕ ನಿಚಯ ಪ್ರಖ್ಯಾತ ಶಾಸ್ತ್ರಂಗಳೊಳ್

ಶೂರರ್ ವೇದ ಸಮೂಹದೊಳ್ ಸಕಲ ತತ್ವಜ್ಞಾನ ಸಂಪತ್ತಿಂ

ದಾರಾಧ್ಯ‌ರ್ ಧರೆಗೆಂದೊಡಿಂ ಪಿರಿಯರಾರ್ ಸಾಸಿರ್ವರಿಂದುರ್ವಿಯೊಳ್‌ ||

 

ʼನಿಚಯʼ ಎಂದರೆ ಸಮೂಹ ಎಂದರ್ಥ. ʼಉರ್ವಿʼ ಎಂದರೆ ಭೂಮಿ.

 

ಪದ್ಯದ ಅರ್ಥವನ್ನು ಹೀಗೆ ಹೇಳಬಹುದು: “ಶ್ರೀ ರಾಮಾಯಣ, ಭಾರತ,ಮನು ಚಾರಿತ್ರಗಳಲ್ಲಿ, ಸಕಲ ವಿಚಾರ-ತರ್ಕ ಶಾಸ್ತ್ರಗಳಲ್ಲಿ ಅವರು ಶೂರರು, ವೇದ ಸಮೂಹಗಳಲ್ಲಿ, ಸಕಲ ತತ್ವಜ್ಞಾನ ಸಂಪತ್ತಿನಿಂದ ಜಗತ್ತಿಗೆ ಅವರು ಆರಾಧ್ಯರು, ಸಾವಿರ ಮಹಾಜನರಿಗಿಂತ ಭೂಮಿಯಲ್ಲಿ ಯಾರು ದೊಡ್ಡವರು ?”

 

ಪದ್ಯ ೩:

ಇದು ಹೂಲಿಯ ಓಣಿಯಾದ ಶಿವೆಯಗೇರಿಯ ನೂರು ಮಹಾಜನರನ್ನು ವರ್ಣಿಸುವ ಕಂದಪದ್ಯ.

ಕವಿ ಗಮಕಿ ವಾದಿ ವಾಗ್ಮಿ

ಳವಿವೇಕದ ದೆಸೆಯನರಿಯರಾಶ್ರಿತ ಜನಮು

ತ್ಸವದಿಂ ಬೇಡಲ್ಕೀವರ್

ಸವಿಲಾಸಿಗಳಲ್ತೆ ಶಿವೆಯಗೇರಿಯ ನೂರ್ವ‌ರ್

 

ಪದ್ಯದ ಅರ್ಥ : “ಕವಿ-ಗಮಕಿ-ವಾದಿ-ವಾಗ್ಮಿಗಳಾಗೋದು ಬೇಡ, ಅವರ ದೆಸೆಯನ್ನು ಕೂಡ ಅರಿಯದ ಆಶ್ರಿತರು ಉತ್ಸಾಹದಿಂದ ಕೇಳಿದರೆ, ಕೇಳಿದ್ದನ್ನು ಕೊಟ್ಟು ಬಿಡುವರು, ಸವಿಲಾಸಿಗಳಲ್ಲವೇ ಶಿವೆಯಗೇರಿಯ ನೂರು ಮಹಾಜನರು ?”

ಉಪಸಂಹಾರ:

ಹೂಲಿಯ ಶಾಸನ ಪದ್ಯಗಳಲ್ಲಿ ಕವಿಗಳು ತಮ್ಮ ಪ್ರೌಢ ಕವಿತ್ವದ ಪ್ರದರ್ಶನ ಮಾಡಿದ್ದಾರೆ. ಹಾಳು ಸುರಿವ ಗುಡಿಗಳಲ್ಲಿರುವ ಈ ಶಾಸನ ಕಲ್ಲುಗಳಲ್ಲಿ ಇಷ್ಟೊಂದು ಕಾವ್ಯ ಸಂಪತ್ತು ಅಡಗಿದೆಯಲ್ಲ ಎಂದು ಅಚ್ಚರಿಯಾಗುತ್ತದೆ. ನಿರಾಸೆಯ ವಿಷಯವೆಂದರೆ ಈ ಪದ್ಯಗಳ ಕವಿಗಳು ತಮ್ಮ ಹೆಸರು ಹೇಳಿಕೊಳ್ಳದೆ ಅನಾಮಿಕರಾಗಿ ಉಳಿದಿರುವುದು.

ಎರಡು ಭಾಗಗಳ ಈ ಬರಹದಲ್ಲಿ ಒಟ್ಟು ಏಳು ಶಾಸನಗಳ ಹತ್ತೊಂಬತ್ತು ಪದ್ಯಗಳನ್ನು ಚರ್ಚಿಸಲಾಗಿದೆ. ಈ ಶಾಸನಗಳಲ್ಲಿ ಮತ್ತು ಇತರ ಶಾಸನಗಳಲ್ಲಿ ಇನ್ನಷ್ಟು ಪದ್ಯಗಳಿವೆ. ಕಾವ್ಯಾಸಕ್ತರು ಉಳಿದ ಪದ್ಯಗಳನ್ನೂ ಗಮನಿಸಬೇಕಾಗಿ ವಿನಂತಿ.


ಆಧಾರ:

·          Epigraphia Indica Vol 18 : ಶಾಸನ ಸಂಖ್ಯೆ - ೨೨ ಇ,ಎಫ್‌, ಎಲ್‌ ಮತ್ತು ಎಮ್.

·         ಶಾಸನ ಪದ್ಯ ಸಿರಿ – ಸಂಪುಟ ೧ (ಸಂಪಾದಕರು : ಶ್ರೀ ಕೆ.ಆರ್.‌ ಗಣೇಶ ಮತ್ತು ಶ್ರೀ ದೇವರಕೊಂಡಾರೆಡ್ಡಿ)

·         ಕ.ಸಾ.ಪ ಕನ್ನಡ ನಿಘಂಟು (ಸಂಪುಟ ೧-೮)

 

ಕಠಿಣ ಪದಗಳ ಅರ್ಥ

ವನಧಿ = ಕಡಲು

ನಿಮಿಷರಾಜ= ಇಂದ್ರ

ವನೀಚಕ್ರ =ಭೂಮಂಡಲ

ಆರಮೆ = ಉದ್ಯಾನ

ಸಹಕಾರ = ಮಾವಿನ ಹಣ್ಣು

ಅಳಿನಿ = ಜೇನ್ನೊಣ

ವಣ್ಣಿಪುದು = ಬಣ್ಣಿಸುವುದು

ಪಾದಯುಗ = ಜೋಡಿಪಾದಗಳು

ಭಾಸುರ = ಪ್ರಕಾಶಮಾನವಾದ;

ಸಾರ = ಮೆಟ್ಟಿಲು

ಬಿದಿ = ಸೃಷ್ಟಿಕರ್ತ

ತರುಂಬಿ = ಅಡ್ಡಬಂದು ನಿಲ್ಲಿಸಿ

ಶಾತಕುಂಭ = ಹೊನ್ನು

ಕಾರ್ಮುಕ= ಮಳೆಗಾಲದ ಆರಂಭ

ಮಹೀದೇವ‌ರು = ಭೂಸುರರು,ಬ್ರಾಹ್ಮಣರು

ಪ್ರಸ್ತುತ = ಹೊಗಳಿದ, ಪ್ರಶಂಸಿಸಿ

ಅಶೇಷ = ಶೇಷವಿಲ್ಲದಿರುವ, ಸಮಸ್ತವಾಗಿರುವ

ಆಶಾ = ದಿಕ್ಕು

ಸಮಾಕೀರ್ಣ= ತುಂಬಿದುದು; ಹರಡಿದುದು :

ವರ್ಣವಿಳಾಸತೆ= ಶಬ್ದಸೌಂದರ್ಯ

ಸಂಸೇವ್ಯ = ಸೇವಿಸಲು ತಕ್ಕುದಾದ ; ಸೇವೆಗೆ ಯೋಗ್ಯವಾದ, ಪೂಜಿಸಲು ತಕ್ಕುದಾದ

ವಿದಿತ = ಬಲ್ಲ,ತಿಳಿದ,ಪ್ರಸಿದ್ಧವಾದ

ರಾಮ= ೧. ಮನೋಹರವಾದು̧ದು ಆನಂದಕರವಾದದು. ೨. ಕತ್ತಲೆಯ ಬಣ್ಣ. ೩. ಬಿಳಿಯ ಬಣ್ಣ. ೪. ಪ್ರಿಯ. ೫. ವಿಷ್ಣುವಿನ ಆರನೆಯ ಅವತಾರ. ೬. ವಿಷ್ಣುವಿನ ಎಂಟನೆಯ ಅವತಾರವಾದ ಶ್ರೀಕೃಷ್ಣನ ಅಣ್ಣ.

ಆರಾಮ = ೧. ಸುಖಕರವಾದುದು, ರಮ್ಯವಾದುದು: ೨. ಉದ್ಯಾನವನ, ತೋಟ

ವಿಕೀರ್ಣ= ಆವರಿಸಿದ, ತುಂಬಿದ

ನಿಖಿಲ = ಎಲ್ಲ

ಅನೀಕ = ಗುಂಪು

ಕೊಟ್ಟಜ = ಕಪ್ಪ

ಏಮಾತು = ಏನು ಮಾತು; ಇನ್ನೇನು ಮಾತು

ಸಲೆ = ಒಂದೇ ಸಮನೆ; ಚೆನ್ನಾಗಿ, ಲೇಸಾಗಿ, ಪೂರ್ಣ

ನೀರದ = ಮಳೆಯ ಮೋಡ

ಅಂಘ್ರಿಪ = ಮರ, ಅಮರಾಂಘ್ರಿಪ = ದೇವಲೋಕದ ಮರ, ಕಲ್ಪವೃಕ್ಷ.

ಉದ್ವೃತ್ತ = ಕೊಬ್ಬಿದ

ವಿಭವ = ಐಶ್ವರ್ಯ ; ಸಿರಿ ; ಸಂಪತ್ತು , ಶಕ್ತಿ ; ಬಲ,. ಹಿರಿಮೆ ; ಘನತೆ

ಪಡಿಪಾಟು = ಸಮಾನ , ಸಾಟಿ

ಪಾಸಟಿ = ಸರಿ; ಸಾಟಿ; ಸಮ