ಹೂಲಿಯಲ್ಲಿ ೧೯೬೯ನೇ ಇಸ್ವಿಯಲ್ಲಿ ದೊರೆತ ಚಾಲುಕ್ಯರ ಮಂಗಳೇಶನ ತಾಮ್ರಶಾಸನವೇ ಹೂಲಿಗೆ ಸಂಬಂಧಿಸಿದ ಹಳೆಯ ಲಿಖಿತ ದಾಖಲೆ. ಹೂಲಿಯಲ್ಲಿರುವ ಎಲ್ಲ ಕಲ್ಬರಹಗಳು ಹತ್ತನೆ ಶತಮಾನ ಅಥವಾ ನಂತರದವು. ಈ ತಾಮ್ರಶಾಸನ ಸುಮಾರು ಕ್ರಿ.ಶ ೬೦೦ನೇ ಇಸ್ವಿಯದು.. ಅಂದರೆ ಉಳಿದ ಬರಹಗಳಿಗಿಂತ ಮೂರು-ನಾಲ್ಕು ಶತಮಾನ ಹಳೆಯದು.
ಸಧ್ಯ ಈ ತಾಮ್ರಶಾಸನ ಧಾರವಾಡ ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ಸಂಸ್ಥೆಯಲ್ಲಿವೆ ( ನಾನು ವಿಚಾರಿಸಿದಾಗ ಸಂಸ್ಥೆಯ ಮುಖ್ಯಸ್ಥರು ಅಲ್ಲಿಲ್ಲ ಎಂದಿದ್ದರು, ಇನ್ನೊಮ್ಮೆ ವಿಚಾರಿಸಬೇಕು- ಗುರು).
ಶಾಸನದಲ್ಲಿ ಚಾಲುಕ್ಯರ ಮಂಗಳೇಶನ (ಶಾಸನ 'ಚಾಲಿಕ್ಯ' ವಂಶದ 'ಮಂಗಳರಾಜ' ಎಂದಿದೆ) ಆಳ್ವಿಕೆಯಲ್ಲಿ, ಅವನ ಸಾಮಂತನಾಗಿದ್ದ ಸೇಂದ್ರಕ ವಂಶದ ರವಿಶಕ್ತಿಯು ಕಿರುವಟ್ಟಗೆರೆಯ ೫೦ ನಿವರ್ತನ ಭೂಮಿಯನ್ನು ಶಾಂತಿನಾಥ ಬಸದಿಗಾಗಿ ದಾನ ಮಾಡಿದ್ದನ್ನು ದಾಖಲಿಸಲಾಗಿದೆ. ದಾನವನ್ನು ಪರಲೂರು ಸಂಘದ ಜೈನಗುರುಗಳಾದ ಶ್ರೀ ನಂದಿಯ ಶಿಷ್ಯ ಅಭಯನಂದಿ ಸ್ವೀಕರಿಸಿದ್ದನು.
ಶಾಸನದಲ್ಲಿ ಉಲ್ಲೇಖಿಸಿದ 'ಕಿರುವಟ್ಟಗೆರೆ'ಯು ಇಂದಿನ ಹೂಲಿಯ ಭಾಗವಾಗಿದೆ, ಪರಲೂರು ಎಂಬುದು ಇಂದಿನ ಬಾಗಲಕೋಟ ಜಿಲ್ಲೆಯ ಹಳ್ಳೂರು ಆಗಿದೆ.
ಶಾಸನವನ್ನು ಮೂರು ತಾಮ್ರದ ಹಾಳೆಗಳಲ್ಲಿ ಬರೆಯಲಾಗಿದೆ - ಮೊದಲ ಮತ್ತು ಮೂರನೆ ಹಾಳೆಗಳಲ್ಲಿ ಒಂದೇ ಬದಿಯಲ್ಲಿ , ಎರಡನೆ ಹಾಳೆಯ ಎರಡೂ ಬದಿಯಲ್ಲಿ ಬರೆಯಲಾಗಿದೆ. ಹಾಳೆಗಳನ್ನು ಒಂದು ಉಂಗುರಿನಲ್ಲಿ ಹಾಕಿ, ಸೇಂದ್ರಕರ ಮರಿಯೊಂದಿಗಿರುವ ಹುಲಿ ('ಸ-ವತ್ಸ ವ್ಯಾಘ್ರ') ಲಾಂಛನದಿಂದ ಮುಚ್ಚಲಾಗಿದೆ. ಶಾಸನವು ಸಂಸ್ಕೃತ ನುಡಿ, ಕನ್ನಡ ಲಿಪಿಯಲ್ಲಿದೆ.
ಚಿತ್ರ ಕೃಪೆ ಮತ್ತು ಹೆಚ್ಚಿನ ಮಾಹಿತಿಗೆ ಎಪಿಗ್ರಾಫಿಯಾ ಇಂಡಿಕಾ -ಸಂಪುಟ ೩೮, ಶಾಸನ ಸಂ: ೪೯/ಪುಟ ೨೮೬) -https://archive.org/details/in.ernet.dli.2015.532805/page/n423/mode/1up?q=%22Huli+Plates+of+Mangalaraja%22.
No comments:
Post a Comment