('ಆಕೃತಿ ಕನ್ನಡ' ಜಾಲ ಪತ್ರಿಕೆಯಲ್ಲಿ “ಹರನ ಕೊರಳ ಹೂಮಾಲೆ- ಹೂಲಿ" ಸರಣಿಯಲ್ಲಿ ಪ್ರಕಟವಾದ ಬರಹ)
ಪಂಚಲಿಂಗೇಶ್ವರ ಗುಡಿ ಮೂಲತಃ ಜೈನ
ಬಸದಿಯಾಗಿತ್ತು ಎನ್ನುವುದು ನಿಜವೇ ?
ಪಂಚಲಿಂಗೇಶ್ವರ ಗುಡಿ
ಹಿಂದೆ ಜೈನ ಬಸದಿ ಆಗಿತ್ತು ಎನ್ನುವುದರಲ್ಲಿ ತಜ್ಞರಿಗೆ ಯಾವುದೇ ಅನುಮಾನವಿಲ್ಲ. ಅದಕ್ಕೆ ಹಲವಾರು
ಸಾಕ್ಷಿಗಳು ಲಭ್ಯವಿವೆ:
೧. ಪಂಚಲಿಂಗೇಶ್ವರ
ಗುಡಿಯ ಪೂರ್ವಕ್ಕೆ ಮುಖಮಾಡಿದ ಮೂರು ಗರ್ಭಗೃಹಗಳಲ್ಲಿ ಮೂರನೆಯದರ ಬಾಗಿಲುಪಟ್ಟಿಯ ಮೇಲಿರುವ ಶಾಸನ[i]ದಲ್ಲಿ ಆಚಾರ್ಯರಾದ ಶ್ರೀ ಪ್ರಭಾಚಂದ್ರ
ಸಿದ್ಧಾಂತದೇವರ ಶಿಷ್ಯರು ಕ್ರಿಶ ೧೨೨೦ರಲ್ಲಿ ʼಮಾಣಿಕ್ಯತೀರ್ಥʼ
(ಬಸದಿ)ಯ ಆ ದ್ವಾರಶಾಖೆಯನ್ನು ಮಾಡಿಸಿದ ವಿಷಯವಿದೆ.
ಸವದತ್ತಿಯ ಕ್ರಿ.ಶ
೧೨೨೮ರ ಶಾಸನವೂ ಶ್ರೀ ಪ್ರಭಾಚಂದ್ರ ಸಿದ್ಧಾಂತದೇವರನ್ನು ಹೂಲಿಯ ʼಮಾಣಿಕ್ಯತೀರ್ಥ
ಬಸದಿಯಾಚಾರ್ಯʼ ಎಂದು ಕರೆದಿರುವುದರಿಂದ ಇಂದಿನ ಪಂಚಲಿಂಗಪ್ಪನ ಗುಡಿ
ಹಿಂದೆ ಮಾಣಿಕ್ಯತೀರ್ಥ ಬಸದಿಯಾಗಿತ್ತು ಎನ್ನುವುದರಲ್ಲಿ ಸಂಶಯವಿಲ್ಲ.
ಖ್ಯಾತ ಪುರಾತತ್ವ ವಿದ್ವಾಂಸ
ಡಾ.ಶ್ರೀನಿವಾಸ ಪಾಡಿಗಾರರ ಪ್ರಕಾರ ʼತೀರ್ಥ ಬಸದಿʼ ಎನ್ನುವುದು
ತೀರ್ಥಂಕರರ ಮೂರ್ತಿಗಳನ್ನು ಸ್ಥಾಪಿಸಿದ ಬಸದಿಗಳಿಗೆ ಬಳಸುತ್ತಿದ್ದ ಹೆಸರು. ಇಲ್ಲಿ ಮುಖ್ಯ ಮೂರು ಗರ್ಭಗುಡಿಯಲ್ಲಿ
೨೨ ತೀರ್ಥಂಕರರ ಮೂರ್ತಿಗಳನ್ನು ಮತ್ತು ಉಳಿದೆರಡು ಗರ್ಭಗೃಹಗಳಲ್ಲಿ ಒಂದೊಂದು ತೀರ್ಥಂಕರರ ಮೂರ್ತಿ
ಸ್ಥಾಪಿತವಾಗಿದ್ದಿರಬಹುದು ಎಂದು ಡಾ. ಪಾಡಿಗಾರರ ಊಹೆ. ಮಧ್ಯದ ಮೂರು ಮುಖ್ಯ ಗರ್ಭಗುಡಿಗಳ ನಡುವೆ ಗೋಡೆಗಳಿರದೇ
ಇರೋದು ಅವರ ವಾದಕ್ಕೆ ಪುಷ್ಠಿಕೊಡುತ್ತದೆ. ಈ ಗುಡಿಯನ್ನು ಕೆಂಪು ಕಲ್ಲಿನಿಂದ ಕಟ್ಟಿರುವುದರಿಂದ ʼ
ಮಾಣಿಕ್ಯತೀರ್ಥʼ ಎಂದು ಹೆಸರು ಬಂದಿರಬಹುದು.
೨. ಬಾಗಿಲ ಪಟ್ಟಿಗಳಲ್ಲಿರುವ
ತ್ರುಟಿತ ಜಿನಬಿಂಬ:
ಜೈನ ಬಸದಿಳಲ್ಲಿ ಬಾಗಿಲ
ಪಟ್ಟಿಯ ಮೇಲೆ (ಲಲಾಟಬಿಂಬದಲ್ಲಿ) ಜಿನಬಿಂಬ ಇರೋದು ಸಾಮಾನ್ಯ. ಪಂಚಲಿಂಗೇಶ್ವರ ಗುಡಿಯ ಐದು ಗರ್ಭಗುಡಿಗಳ
ಬಾಗಿಲುಗಳ ಮೇಲೆ ಮತ್ತು ಗುಡಿಯ ಮುಖ್ಯ ಬಾಗಿಲಿನ ಮೇಲೆಯೂ ಜಿನಬಿಂಬ ಇದ್ದಿರಬಹುದು. ಆದರೆ ಈಗ ಎಲ್ಲ
ಬಾಗಿಲಪಟ್ಟಿಗಳ ಮೇಲಿನ ಜಿನಬಿಂಬಗಳನ್ನು ಕಿತ್ತಿ ಹಾಳುಮಾಡಲಾಗಿದೆ, ಆದರೆ ಉತ್ತರದಿಕ್ಕಿಗೆ ಮುಖ ಮಾಡಿರುವ
ಗರ್ಭಗೃಹದ ಬಾಗಿಲಪಟ್ಟಿಯ ಮೇಲಿನ ಜಿನಬಿಂಬ ಹಾಳಾಗಿದ್ದರೂ ಗುರುತಿಸಬಹುದು..
೩. ಗೋಪುರದಲ್ಲಿನ ಜೈನ
ಸರಸ್ವತಿ, ಯಕ್ಷಿ ಮೂರ್ತಿಗಳು.
೪. ಇತರ ಶಾಸನ ಆಧಾರಗಳು:
ಮೇಲೆ ಹೇಳಿದ ಕ್ರಿ.ಶ.೧೨೨೦ರ
ಶಾಸನದಂತೆಯೇ, ಪೂರ್ವಕ್ಕೆ ಮುಖಮಾಡಿದ ಮೂರು ಗರ್ಭಗೃಹಗಳಲ್ಲಿ ಮೊದಲನೆಯದರ ಬಾಗಿಲುಪಟ್ಟಿಯ ಮೇಲೆ ಕಾಲ
ನಮೂದಿಸದ, ಸುಮಾರು ೧೨-೧೩ನೇ ಶತಮಾನದ ಬರಹವೊಂದಿದೆ. ಅದರಲ್ಲಿ ಜೈನ ಗುರುಗಳಾದ ಶ್ರೀ ನೇಮಿಚಂದ್ರ ಸಿದ್ಧಾಂತ
ಚಕ್ರವರ್ತಿಗಳ ಶಿಷ್ಯರು ಎರಡು ದ್ವಾರಶಾಖೆಗಳನ್ನು ಮಾಡಿಸಿದ ವಿಷಯವಿದೆ. ಅದಲ್ಲದೇ ಗುಡಿಯಲ್ಲಿ ಸಿಕ್ಕ
ಇನ್ನೂ ಒಂದು ಶಾಸನ ಫಲಕವೂ (EI XVIII ೨೨/H) ಜೈನಧರ್ಮಕ್ಕೆ ಸಂಬಂಧಿಸಿದೆ. ಅವೆರಡೂ ಶಾಸನಗಳು ಗುಡಿಯ
ಜೈನ ಹಿನ್ನೆಲೆಯನ್ನು ಧೃಢೀಕರಿಸುತ್ತವೆ.
ಹಾಗೆಯೇ:
- ·
ಈಗ ಗುಡಿಯ
ಸಭಾಮಂಟಪದಲ್ಲಿ ಬಾಗಿಲ ಪಕ್ಕದಲ್ಲಿ ಇಟ್ಟಿರುವ ವೈಷ್ಣವ ಶಾಸನ ಫಲಕ ೧೮೮೨ರ ಸುಮಾರಿನಲ್ಲಿ ಶ್ರೀ ಫ್ಲೀಟ್‌ರು
ವಿರಕ್ತಮಠದ ಹೊರಗಿದ್ದುದನ್ನು ತಂದು ಇಟ್ಟದ್ದು.
- ·
ಅದೇ
ಬಾಗಿಲ ಇನ್ನೊಂದು ಪಕ್ಕದಲ್ಲಿರುವ ಶೈವ ಶಾಸನ ಫಲಕ ನಂತರದಲ್ಲಿ ಯಾರೋ, ಎಲ್ಲಿಂದಲೋ ತಂದಿಟ್ಟದ್ದು.
ಅದನ್ನು ಶ್ರೀ ಫ್ಲೀಟ್‌ರು ದಾಖಲಿಸಿಲ್ಲ, ಅಂದರೆ ಅದನ್ನು ಕ್ರಿ.ಶ ೧೮೮೨ರ ನಂತರದಲ್ಲಿ ತಂದಿರಲಾಗಿದೆ.
ಮೂಲತಃ
ಜೈನ ಬಸದಿಯಾಗಿದ್ದು ಗುಡಿಯಾಗಿ ಬದಲಾದದ್ದು
ಯಾವಾಗ ?
•
ಗುಡಿಯ
ಅಧಿಷ್ಢಾನ, ಮಕರಪಟ್ಟಿಗಳ ಮೇಲಿರುವ ಬರಹಗಳ ಲಿಪಿ ಸಾಮ್ಯತೆಯಿಂದ ಈಗಿನ ಗುಡಿಯ ಕಟ್ಟಡವನ್ನು ಜೀರ್ಣೋದ್ಧಾರ
ಮಾಡಿದ್ದು ೧೩ನೇ ಶತಮಾನದ್ದು ಎಂದು ಹೇಳಬಹುದು. ಗುಡಿಯ ದ್ವಾರಶಾಖೆಯಲ್ಲಿರುವ ಎರಡು ಶಾಸನಗಳ ಕಾಲವೂ
ಅದೇ ಸಮಯದ್ದಾಗಿದ್ದು, ಈ ತಥ್ಯವನ್ನು ಧೃಢೀಕರಿಸುತ್ತವೆ. ಆದರೆ ಅದಕ್ಕಿಂತ ಮೊದಲಿದ್ದ ಬಸದಿಯ ಉಲ್ಲೇಖವಿದೆಯಾ ?
•
ಹೂಲಿಯಲ್ಲಿ ಸಿಕ್ಕ ಅತ್ಯಂತ ಹಳೆಯ ದಾಖಲೆ, ೬ನೇ ಶತಮಾನದ ಮಂಗಳೇಶನ ತಾಮ್ರ ಶಾಸನ. ಅದರಲ್ಲಿ ಸೇಂದ್ರಕ ವಂಶದ ರವಿಶಕ್ತಿಯು ʼಕಿರುವಟ್ಟಗೆರೆʼಯ ೫೦ ನಿವರ್ತನ ಭೂಮಿಯನ್ನು ʼಶಾಂತಿನಾಥ ಬಸದಿʼಗಾಗಿ ದಾನ ಮಾಡಿದ್ದನ್ನು ದಾಖಲಿಸಲಾಗಿದೆ.
•
ʼಶಾಂತಿನಾಥ ಬಸದಿʼಯೇ ಪಂಚಲಿಂಗೇಶ್ವರ ಗುಡಿ ಎಂದು ಹೇಳಲು ಸಾಕಷ್ಟು ಸಾಕ್ಷಗಳಿಲ್ಲ. ಅಷ್ಟೇ
ಅಲ್ಲ, ಅಲ್ಲಿ ಉಲ್ಲೇಖವಾಗಿರುವ ʼಕಿರುವಟ್ಟಕೆರೆ ಗ್ರಾಮʼ ಕೆಲ ಪಂಡಿತರು ಊಹಿಸಿದಂತೆ ಹೂಲಿಯ ಭಾಗವಾಗಿರದೇ, ಗದಗ ಜಿಲ್ಲೆಯ ʼಕಿರೀಟಗೇರಿʼಯೂ ಆಗಿರಬಹುದು.
•
ಹೂಲಿಯ ಕ್ರಿಶ ೧೦೪೩ರ ಶಾಸನ ಲಚ್ಚಿಯಬ್ಬರಸಿ ಎಂಬ ಹೆಣ್ಣುಮಗಳು ಒಂದು ಬಸದಿಯನ್ನು
ಜೀರ್ಣೋದ್ಧಾರ ಮಾಡಿದನ್ನು ಉಲ್ಲೇಖಿಸುತ್ತದೆ. (EI
XVIII ೨೨/ಬಿ)
•
ಈ ಶಾಸನ ಫಲಕ ಈಗ ಪಂಚಲಿಂಗೇಶ್ವರ ಗುಡಿಯಿಂದ ಕೆಲವೇ ಗಜಗಳಲ್ಲಿರುವ ವೀರಭದ್ರದೇವರ
ಗುಡಿಯ (ಇದು ಆಧುನಿಕ ಗುಡಿ) ಗೋಡೆಯಲ್ಲಿರುವುದರಿಂದ ಉಲ್ಲೇಖಿತ ಬಸದಿ ಪಂಚಲಿಂಗೇಶ್ವರ ಗುಡಿಯಿದ್ದಲ್ಲಿಯೇ
ಇದ್ದಿರಬಹುದು. ಪಂಚಲಿಂಗೇಶ್ವರ ಗುಡಿಯ ಆವರಣದಲ್ಲಿಯೇ ಇದ್ದಿರಬಹುದಾಗಿದ್ದ ಈ ಶಾಸನ ಫಲಕ ಸ್ಥಳಾಂತರಗೊಂಡು,
ವೀರಭದ್ರದೇವರ ಗುಡಿಯನ್ನು ಕಟ್ಟುವಾಗ ಅದನ್ನು ಗೋಡೆಯಲ್ಲಿ
ಅಳವಡಿಸಿಕೊಂಡಿರಬಹುದು.
•
ಹನ್ನೆರಡನೆ
ಶತಮಾನದ್ದೆಂದು ತಜ್ಞರು ಊಹಿಸಿರುವ, ಬಹುಭಾಗ ಹಾಳಾಗಿ ಹೋಗಿರುವ ಜೈನ ಶಾಸನ (EI
XVIII ೨೨/H)ದಲ್ಲಿ ಗಂಗವಂಶದ ಒಂದು ಅನಾಮಿಕ ಟಿಸಿಲಿನ ರಾಜ ಪಿಟ್ಟನ ಮಗ ಬಿಜ್ಜಳ ಎನ್ನುವವನು
೨೪ ತೀರ್ಥಂಕರರ ಮೂರ್ತಿಮಾಡಿಸಿದ್ದು ದಾಖಲಾಗಿದೆ. ಈ ಶಾಸನದ ಕಲ್ಲು ಪಂಚಲಿಂಗ ಗುಡಿಯ ಆವರಣದಲ್ಲಿಯೇ
ಇರುವುದು, ಅದರ ಹಾಳಾದ ಸಾಲುಗಳಲ್ಲಿ ʼಮಾಣಿಕ್ಯ ತೀರ್ಥʼದ
ಉಲ್ಲೇಖವಿರುವುದು, ಈ ಮೊದಲು ಹೇಳಿದ ಡಾ. ಪಾಡಿಗಾರರ ಊಹೆಗೆ ಪುಷ್ಟಿಕೊಡುತ್ತದೆ.
• ಕ್ರಿಶ
೧೨೦೪ರ ಕೊಪ್ಪಳ ಶಾಸನವು [iii]
“ಜೈನ ತೀರ್ಥಸ್ಥಳಗಳಾದ
ಕೊಳತ್ತೂರು, ಲೊಕ್ಕಿಗುಂಡಿ,
ಕುಪಣ, ಬಂಕಾಪುರ, ಹೂಲಿ,
ಕೋಗಳಿ, ಮುಳುಗುಂದ, ಅಶೋಕೆ, ಬಟ್ಟಕೆಱೆ, ಹಾನುಗಂಲ್ಲು, ನವಿಲ್ಗುಂದ,
ಬೆಳಗುಳ, ಬಂದಣಿಕಾಪುರ, ಪುರಿಕರ- ಮುಂತಾದ
ಊರುಗಳಲ್ಲಿನ ಚೈತ್ಯಾಲಯಗಳನ್ನು ಕವಡೆ ಬೊಪ್ಪಶೆಟ್ಟಿಯು ಜೀರ್ಣೋದ್ಧಾರ ಮಾಡಿದನು” ಎಂದು ತಿಳಿಸುತ್ತದೆ. ಕವಡೆ ಬೊಪ್ಪಶೆಟ್ಟಿಯು ಹೆಸರಾಂತ ಜಿನಭಕ್ತ, ಮೊದಲು ಕಲಚೂರಿಗಳಲ್ಲಿ, ನಂತರ ಹೊಯ್ಸಳ ವೀರಬಲ್ಲಾಳನಲ್ಲಿ
ಮಂತ್ರಿಯಾಗಿದ್ದವನು. ಈತನು ಹೂಲಿಯಲ್ಲಿ ಜೀರ್ಣೋದ್ಧಾರ ಮಾಡಿದ ಬಸದಿಯೇ ಈಗಿನ ಪಂಚಲಿಂಗೇಶ್ವರ
ಗುಡಿಯಾಗಿರಬಹುದು.
•
ಕ್ರಿಶ
೧೨೨೦ರ ದ್ವಾರಶಾಖೆಯ ಶಾಸನದಲ್ಲಿ ಜೈನ ಮುನಿ ಪ್ರಭಾಚಂದ್ರ ಸಿದ್ಧಾಂತದೇವರುಗಳನ್ನು ಹೆಸರಿಸಿರುವುದರಿಂದ
ಆ ಕಾಲದಲ್ಲಿಯಂತೂ ಇದು ಬಸದಿಯಾಗಿಯೇ ಇತ್ತು.
•
ನಾಗರಾಶಿಯ
ಕಂಬ ಶಾಸನ (EI XVIII ೨೨/I) : ಕಾಳಾಮುಖ ಗುರುಗಳಾಗಿದ್ದ ಜ್ಞಾನಶಕ್ತಿಯ ಶಿಷ್ಯ ನಾಗರಾಶಿಯು ಆ ಕಂಬವನ್ನು
ಮಾಡಿಸಿದ ವಿಷಯದಿಂದ ಆ ಶಾಸನ ಬರೆಸುವ ಕಾಲಕ್ಕೆ ಗುಡಿ ಜೈನರ ಅಧೀನದಿಂದ ಕಾಳಾಮುಖರ ಆಡಳಿತಕ್ಕೆ ಒಳಪಟ್ಟಿತ್ತು
ಎಂದು ಊಹಿಸಬಹುದು. ಈ ಶಾಸನದಲ್ಲಿ ಕಾಲ ದಾಖಲಾಗಿಲ್ಲ, ಆದರೆ ಲಿಪಿಸಾಮ್ಯದಿಂದ ೧೨-೧೩ನೇ ಶತಮಾನದ್ದೆಂದು
ಊಹಿಸಬಹುದು.
•
EI XVIII ೨೨/E ಶಾಸನದ ಮೊದಲ ಭಾಗಲ್ಲಿ ಕ್ರಿಶ ೧೧೦೪ರಲ್ಲಿ ಜ್ಞಾನಶಕ್ತಿ
ಗುರುವಿನ ಶಿಷ್ಯ ಆಚಾರ್ಯ ತತ್ಪುರುಷರು ಉಂಬಳಿ ಸ್ವೀಕರಿಸಿದ ದಾಖಲೆಯಿದೆ. ಅದೇ ಶಾಸನದ ಎರಡನೇ ಭಾಗದಲ್ಲಿ
ಕ್ರಿಶ ೧೧೬೨ರಲ್ಲಿ ಜ್ಞಾನಶಕ್ತಿ ಆಚಾರ್ಯರೇ ದಾನಕೊಟ್ಟ
ದಾಖಲೆಯಿದೆ. ಕ್ರಿ.ಶ. ೧೧೦೪ರಲ್ಲಾಗಲೇ ಚಾಳುಕ್ಯ ಚಕ್ರವರ್ತಿ
ಭುವನೈಕ್ಯಮಲ್ಲನಿಂದ ಪೂಜಿತಗೊಂಡು, ಅಂಧಾಸುರ ಗುಡಿ ಕಟ್ಟಿ, ಅಲ್ಲಿ ತಮ್ಮ ಶಿಷ್ಯನನ್ನು ಉಂಬಳಿ ಸ್ವೀಕರಿಸುವಷ್ಟು
ಮಟ್ಟಿಗೆ ಬೆಳೆಸಿದ್ದ ಜ್ಞಾನಶಕ್ತಿ ಆಚಾರ್ಯರು ಮುಂದೆ ೫೮ ವರ್ಷ ಬದುಕಿದ್ದರೆ ? ಅಥವಾ ಮೊದಲನೇ ಭಾಗದಲ್ಲಿ
ಹೇಳಿದ ಮತ್ತು ಎರಡನೇ ಭಾಗದಲ್ಲಿ ಹೇಳಿದ ಜ್ಞಾನಶಕ್ತಿ ಆಚಾರ್ಯರು ಬೇರೆ-ಬೇರೆಯೇ ? ಏನಾದರೂ ಇವರು (ಅಥವಾ ಇವರಿಬ್ಬರು) ನಾಗರಾಶಿಗಿಂತ ಒಂದು ಶತಮಾನವಾದರೂ
ಹಿಂದಿನವರು, ಹಾಗಾಗಿ ಅವನ ಗುರು ಜ್ಞಾನಶಕ್ತಿ ಆಗಿರಲು ಸಾಧ್ಯವಿಲ್ಲ.
•
EI XVIII ೨೨/K ಶಾಸನವೂ ಜ್ಞಾನಶಕ್ತಿ ಆಚಾರ್ಯರು ಅಂಧಕಾಸುರ ದೇವರ
ಗುಡಿಯ ಮಕರತೋರಣ ಮಾಡಿಸಿದ್ದನ್ನು ದಾಖಲಿಸುತ್ತದೆ. ಶಾಸನದಲ್ಲಿ ಕಾಲ ದಾಖಲಾಗಿಲ್ಲ. ಲಿಪಿಸಾಮ್ಯದಿಂದ
ಇದು ಮತ್ತು ನಾಗರಾಶಿಯ ಕಂಬ ಶಾಸನವೂ ಒಂದೇ ಕಾಲದ್ದು ಮತ್ತು ಎರಡರಲ್ಲಿ ಉಲ್ಲೇಖಿಸಿದ ಜ್ಞಾನಶಕ್ತಿ
ಆಚಾರ್ಯರು ಒಬ್ಬರೇ ಎನ್ನಬಹುದು.
•
ತಜ್ಞರ
ಪ್ರಕಾರ ಹೂಲಿಯ ಹಿರೇಮಠ, ಕಾಳಾಮುಖ ಸಂಪ್ರದಾಯದ ಮುಂದುವರಿಕೆ. ಹೀಗಾಗಿ ಮಠದ ಪಟ್ಟಾವಳಿ[iv]ಯನ್ನು ಅಚಾರ್ಯರ ಕಾಲ ತೀರ್ಮಾನಕ್ಕಾಗಿ
ಬಳಸಬಹುದು. ಪಟ್ಟಾವಳಿಯ ಕ್ರಮಸಂಖ್ಯೆ ೨೫ರಿಂದ -೩೦ರ ವರೆಗಿನ ಪೀಠಾಧಿಪತಿಗಳ ಹೆಸರುಗಳು EI XVIII
೨೨/E ಶಾಸನದಲ್ಲಿ ದಾಖಲಿಸಿದ ಗುರುಪಂರಂಪರೆಯೊಂದಿಗೆ ಹೊಂದಿಕೆಯಾಗುತ್ತವೆ. ಪಟ್ಟಾವಳಿಯಲ್ಲಿನ ೨೯ನೇ
ಪೀಠಾಧಿಪತಿ ಜ್ಞಾನಶಕ್ತಿ ಆಚಾರ್ಯರ ಪಟ್ಟದ ಅವಧಿಯನ್ನು ಕ್ರಿಶ ೧೦೬೪ರಿಂದ ೧೦೯೩ರ ವರೆಗೆ ಮತ್ತು ೩೦ನೇ
ಪೀಠಾಧಿಪತಿ ತತ್ಪುರುಷ ಆಚಾರ್ಯರ ಅವಧಿಯನ್ನು ಕ್ರಿ.ಶ ೧೦೯೩ ರಿಂದ ೧೧೦೬ರವರೆಗೆ ಎಂದು ಹೇಳಿದೆ. ಅದರಿಂದ
EI XVIII ೨೨/E ಶಾಸನದ ಮೊದಲ ಭಾಗದ ಜ್ಞಾನಶಕ್ತಿ ಆಚಾರ್ಯರ ಕಾಲ ಹೊಂದಿಕೆಯಾಗುತ್ತದೆ ಮತ್ತು ಶಾಸನದ ಎರಡನೆ ಭಾಗದಲ್ಲಿ ಬರುವ ಜ್ಞಾನಶಕ್ತಿಗಳಿಗೆ ಯಾವುದೇ
ಆಧಾರ ಸಿಗುವುದಿಲ್ಲ.
•
ಅದೇ ಪಟ್ಟಾವಳಿಯ ಕ್ರಮಸಂಖ್ಯೆ ೩೭ರಲ್ಲಿಯೂ ಒಬ್ಬ ಜ್ಞಾನಶಕ್ತಿ
ಆಚಾರ್ಯರಿದ್ದಾರೆ – ಅವರ ಪಟ್ಟದ ಕಾಲ ಕ್ರಿಶ ೧೩೦೯-೧೩೩೬. ಈ ಜ್ಞಾನಶಕ್ತಿಗಳು ನಾಗರಾಶಿ ಶಾಸನದ ಕಾಲಕ್ಕೆ
ಹೊಂದುತ್ತಾರೆ.
ಆದ್ದರಿಂದ
೧೪ನೇ ಶತಮಾನದ ಆದಿಯಲ್ಲಿ ಬಸದಿ ಗುಡಿಯಾಗಿ ಬದಲಾಗಿದೆ ಎಂದು ಸತರ್ಕ ಊಹೆ ಮಾಡಬಹುದು
ಒಂದು ಪ್ರತಿವಾದ:
ʼಶೈವ ಕಾಳಾಮುಖ ಮುನಿಗಳ ಶಿಷ್ಯರು ಕಂಬ ಮಾಡಿಸಿಕೊಟ್ಟರುʼ ಎಂದ
ಮಾತ್ರಕ್ಕೆ ಅದಾಗಲೇ ಶೈವರು ಗುಡಿಯ ಮೇಲೆ ಹತೋಟಿ ಸಾಧಿಸಿದ್ದರು ಎಂದು ಹೇಳಬಹುದೇ ?
ಹೌದು, ಅದು ತಾರ್ಕಿಕವಾದ
ಅನುಮಾನ. ಕಾಳಮುಖರು ಮತ್ತು ಜೈನರ ನಡುವೆ ಸೌಹಾರ್ಧಯುತ ಸಂಬಂಧಗಳ ಹಲವಾರು ಘಟನೆಗಳು ಶಾಸನಗಳಲ್ಲಿ ಸಿಗುತ್ತವೆ.
ಈ ಮೊದಲು ಉಲ್ಲೇಖಿಸಿದ ಸವದತ್ತಿಯ ಕ್ರಿ.ಶ ೧೨೨೮ರ ಶಾಸನವೂ ಕೂಡ ಅಂತಹ ಉದಾಹರಣೆ ಒದಗಿಸುತ್ತದೆ. ಅದರಲ್ಲಿ
ಸೌದತ್ತಿಯ ಮಲ್ಲಿಕಾರ್ಜುನ ಗುಡಿಗೆ ಮೇಲೆ ಹೇಳಿದ ಜೈನ ಮುನಿ ಪ್ರಭಾಚಂದ್ರ ಸಿದ್ಧಾಂತದೇವರುಗಳು ತಮ್ಮ
ಶಿಷ್ಯರೊಂದಿಗೆ ಸೇರಿ ದಾನ ಮಾಡಿದ ಸಂಗತಿ ದಾಖಲಾಗಿದೆ. ಹೀಗಾಗಿ ಕಾಳಾಮುಖರು ತಮ್ಮ ಶಿಷ್ಯರಿಂದ ಜೈನ
ಬಸದಿಗೆ ಕಂಬ ಮಾಡಿಸಿಕೊಟ್ಟಿರುವುದು ಅಸಂಭವವಲ್ಲ.
ಉಪಸಂಹಾರ:
ಹೂಲಿಯ ಪಂಚಲಿಂಗೇಶ್ವರ
ಗುಡಿ ಮೂಲತಃ ಜೈನ ಬಸದಿಯಾಗಿತ್ತು ಎಂಬುದು ಅನುಮಾನಾತೀತ. ಬಸದಿ ಶೈವ ಗುಡಿಯಾಗಿ ೧೪ನೇ ಶತಮಾನದ ಆರಂಭದಲ್ಲಿ
ಬದಲಾಗಿರಬಹುದು ಎಂದು ಊಹಿಸಬಹುದು, ನಿಖರವಾಗಿ ಹೇಳಲು ಸಧ್ಯ ಲಭ್ಯವಿರುವ ದಾಖಲೆಗಳಿಂದ ಸಾಧ್ಯವಿಲ್ಲ.
ಆಧಾರ
ಸೂಚಿ:
[i] ARSIE 1940-41 ಶಾಸನ ಸಂ:25
[ii] ಕರ್ನಾಟಕ ಇನ್ಸ್‌ಕ್ರಿಪ್ಷನ್ಸ್ -೬, ಶಾಸನ ಸಂ :
೭೩
[iii] ʼಚಂದ್ರಕೊಡೆʼ - ಶ್ರೀ ಹಂಪ ನಾಗರಾಜಯ್ಯ, ಪುಟ-೨೫. ಲಿಂಕ್
[iv] ಶ್ರೀ ಪೂವಲ್ಲಿ ಸಿಂಹಾಸನ ಬೃಹನ್ಮಠದ ಸಂಕ್ಷಿಪ್ತ ಇತಿಹಾಸ
– ಪುಟ-೩೨