Friday, 2 February 2024

ಶಾಸನ ಪದ್ಯಗಳಲ್ಲಿ ಹೂಲಿ – ಭಾಗ ೧

(ಆಕೃತಿ ಕನ್ನಡ ಜಾಲತಾಣದಲ್ಲಿ “ಹರನ ಕೊರಳ ಹೂಮಾಲೆ - ಹೂಲಿ" ಸರಣಿಯಲ್ಲಿ ಪ್ರಕಟವಾದ ಬರಹ) 

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಹೂಲಿ ಇಂದು ಒಂದು ಚಿಕ್ಕ ಹಳ್ಳಿ. ಆದರೆ ಪ್ರಾಚೀನ ಕಾಲದಲ್ಲಿ ವಿದ್ಯಾಕೇಂದ್ರ, ಆಡಳಿತ ಕೇಂದ್ರ, ಧಾರ್ಮಿಕ ಕೇಂದ್ರವಾಗಿದ್ದಕ್ಕೆ ಕುರುಹುಗಳಾಗಿ ಈ ಗ್ರಾಮದಲ್ಲಿರುವ ಭವ್ಯ ದೇವಾಲಯಗಳು, ಮಠಗಳು, ದೊರೆತಿರುವ ಶಿಲಾಶಾಸನಗಳು, ತಾಮ್ರಪಟಗಳು, ವೀರಗಲ್ಲುಗಳು ಇಂದಿಗೂ ಸಾಕ್ಷಿನುಡಿಯುತ್ತಿವೆ. ಶಿಲಾಶಾಸನಗಳಲ್ಲಿ 'ಹೂಲಿ' ಯನ್ನು 'ಪುಲಿ', 'ಪುಲಿಗ್ರಾಮ', 'ಪುಲಿಪುರ', 'ಪೂವಲ್ಲಿ', 'ಪುಲಿ ಅಗ್ರಹಾರ', 'ಮಹಾಗ್ರಹಾಪೂಲಿ', 'ಚೂಡಾಮಣಿ ಪೂಲಿ' ಮುಂತಾದ ಹೆಸರುಗಳಿಂದ ಕರೆಯಲಾಗಿದೆ. ಹೂಲಿಯ ಜನರು ಅಪಾರ ಕವಿತ್ವದ ಪ್ರತಿಭಾಶಾಲಿಗಳಾಗಿದ್ದರು ಮಾತ್ರವಲ್ಲ, ತಮ್ಮ ಊರಿನ ಬಗ್ಗೆ ಅಗಾಧ ಪ್ರೀತಿಯನ್ನು ಕಾವ್ಯದಲ್ಲಿ ತೋರಿಸುತ್ತಿದ್ದರು. ಹಲವಾರು ಕಲ್ಬರಹಗಳಲ್ಲಿ ಹೂಲಿಯ ಹಿರಿಮೆಯನ್ನು ಸಾರುವ ಪದ್ಯಗಳಿವೆ. ಎಷ್ಟು ಊರುಗಳಿಗೆ ಇಂತಹ ಭಾಗ್ಯವಿದ್ದೀತು ?

 

ಕಾಲನ ಆಕ್ರಮಣಕ್ಕೆ ಸಿಕ್ಕಿ ಪುರಾತತ್ವದ ಅವಷೇಶಗಳು ನಾಶವಾಗಿ ಹೋಗುತ್ತಿರುವಾಗ, ಇತಿಹಾಸದ ಬಹುಮುಖ್ಯ ಆಕರಗಳಾದ ಶಾಸನಗಳಲ್ಲಿ ಹೂಲಿಯನ್ನು, ಹೂಲಿಯ ಜನರನ್ನು ವರ್ಣಿಸುವ ಪದ್ಯಗಳನ್ನು ಅರ್ಥೈಸಿ,ಆನಂದಿಸುವುದು, ಹೂಲಿಯ ಜನರಿಗೆ, ಹೂಲಿಗೆ ಸಂಬಂಧಿಸಿದವರಿಗೆ ಮತ್ತು ಎಲ್ಲ ಕನ್ನಡಿಗರಿಗೆ ನೆನಪಿಸೋದು ಅನೌಪಚಾರಿಕ ಬರಹದ ಉದ್ದೇಶ. ಎರಡು ಭಾಗಗಳಲ್ಲಿರುವ ಲೇಖನದ ಮೊದಲ ಭಾಗದಲ್ಲಿ ಈಗ ಹೂಲಿಯ ವೀರಭದ್ರೇಶ್ವರ ಗುಡಿಯಲ್ಲಿರುವ ಮೂರು ಶಾಸನಗಳಲ್ಲಿನ ಪದ್ಯಗಳನ್ನು ಗಮನಿಸೋಣ.

 

ಬರಹದಲ್ಲಿ ಪದ್ಯಗಳ ಪಠ್ಯ ಓರೆ ಅಕ್ಷರಗಳಲ್ಲಿದೆ, ಉಳಿದ ಬರಹ ನೇರ ಅಕ್ಷರಗಳಲ್ಲಿದೆ.  ಬಹುತೇಕ ಕಠಿಣಪದಗಳ ಅರ್ಥಗಳನ್ನು ಭಾವಾರ್ಥದಲ್ಲಿಯೇ ವಿವರಿಸಲಾಗಿದೆ ಉಳಿದ ಪದಗಳ ಅರ್ಥವನ್ನು ಬರಹದ ಕೊನೆಗೆ ಪಟ್ಟಿಯಲ್ಲಿ ಕೊಡಲಾಗಿದೆ.

 

ಕ್ರಿ.. ೧೦೪೩ರ ಶಾಸನ ( ಇಐ ೧೮ -೨೨/ಬಿ)

ಹೂಲಿಯ ವೀರಭದ್ರೇಶ್ವರ ಗುಡಿಯ ಗೂಢಮಂಟಪದಲ್ಲಿರುವ  ಕ್ರಿ.. ೧೦೪೩ರ ಕಲ್ಯಾಣ ಚಾಲುಕ್ಯರ ಕಾಲದ ಕಲ್ಬರಹದಲ್ಲಿ ಸ್ಥಾನೀಯ ಅಧಿಕಾರಿ ಅಂಕರಸನ ಹೆಂಡತಿ ಲಚ್ಚಿಯಬ್ಬರಸಿಯು ಬಸದಿಯೊಂದನ್ನು ಕಟ್ಟಿಸಿ ಅದಕ್ಕೆ ಭೂಮಿಯನ್ನು ದತ್ತಿ ಬಿಟ್ಟ ವಿಷಯವಿದೆ. ಶಾಸನದಲ್ಲಿ ಲಚ್ಚಿಯಬ್ಬರಸಿ, ಆಕೆಯ ಕುಟುಂಬವನ್ನು ಕಾವ್ಯದಲ್ಲಿ ವರ್ಣಿಸಿ, ಬೆಳ್ವಲ-ಹೂಲಿ-ಹೂಲಿಯ ಮಹಾಜನರನ್ನು ಹೊಗಳುವ ಪದ್ಯಗಳಿವೆ.

 

ಪದ್ಯ೧:

  ಶಾಸನದಲ್ಲಿರುವ ಹೂಲಿಯ ಬಗೆಗೆ ಚಂಪಕಮಾಲಾ ವೃತ್ತ ಛಂದಸ್ಸಿನಲ್ಲಿರುವ ಪದ್ಯ ಹೀಗಿದೆ:

 

ಶರನಿಧಿ ಮೇಖಲಾವೃತ ವಸುಂಧರೆಯೆಂಬ ವಿಲಾಸಿನಿ ಮುಖಾಂ

ಬುರುಹದವೋಲ್ ವಿರಾಜಿಸುವ ಬೆಳ್ವಲನಾಳ್ಕೆ ಪೊದಳ್ದಿ ಶೋಭೆಗಾ

ಗರಮೆನಿರ್ಪ್ಪ ಪೂಲಿ ತಿಲಕಾಕೃತಿಯಿಂದೆಸೆದಿರ್ಪುದಾ ಪುರಂ

ಸುರಪುರಮಂ ಕುಬೇರನಳಕಾಪುರಮಂ ನಗುಗುಂ ವಿಳಾಸಂ

 

ʼಶರನಿಧಿʼ ಎಂದರೆ ಸಮುದ್ರ. ʼಮೇಖಲಾʼ ಎಂದರೆ ಸೊಂಟದ ಪಟ್ಟಿ, ಒಡ್ಯಾಣ, ಡಾಬು. ʼಅಂಬುರುಹʼ ಎಂದರೆ ಕಮಲ.

 

ಪದ್ಯದ ಅರ್ಥಸಮುದ್ರ ಒಡ್ಯಾಣದಿಂದ ಅಲಂಕೃತವಾದ ಭೂಮಿಯೆಂಬ ವಿಲಾಸಿನಿಯ ಮುಖಕಮಲದಂತೆ ವಿರಾಜಿಸುತ್ತಿರುವುದು ಬೆಳವಲ ನಾಡು. ನಾಡಿನಲ್ಲಿ ಶೋಭಾಯಮಾನವಾದ ಪೂಲಿಯು ತಿಲಕಾಕೃತಿಯಂತೆ ಶೋಭಿಸುವಂತಿದೆ. ನಗರವು ದೇವನಗರಿ ಮತ್ತು ಕುಬೇರನ ಊರಾದ ಅಲಕಾಪುರಕ್ಕೆ ಹಾಸ್ಯಮಾಡುವಂತಿದೆ”.  

 

 

ಪದ್ಯ ೨:

ಅದೇ ಬರಹದಲ್ಲಿ ಮುಂದುವರಿದು ಶಾಸನಕವಿ  ಹೂಲಿಯ ಮಹಾಜನರ ಬಗ್ಗೆ ʼತ್ತೇಭವಿಕ್ರೀಡಿತʼ ವೃತ್ತದಲ್ಲಿ ಹೀಗೆ ಹೇಳಿದ್ದಾನೆ:

ಸಕಲ ವ್ಯಾಕರಣಾರ್ಥಶಾಸ್ತ್ರ ಚಯದೊಳ್ ಕಾವ್ಯಂಗಳೊಳ್ ಸಂದ ನಾ

ಟಕದೊಳ್ ವರ್ಣ ಕವಿತ್ವದೊಳ್ ನೆಗಳ್ದಿ ವೇದಾಂತಗಳೊಳ್ ಪಾರಮಾ

ರ್ಥಿಕದೊಳ್ ಲೌಕಿಕದೊಳ್ ಸಮಸ್ತಕಳೆಯೊಳ್ ವಾಗೀಶನಿಂದಂ ಯಶೋ

ಧಿಕರಾದ‌ರ್ ಪೊಳ್ವಿಲ್ಲಿಗಾರಳವೊ ಪೇಳ್ ಸಾಸಿರ್ವರ ಖ್ಯಾತಿಯಂ ॥

 

ವರ್ಣಕವಿತ್ವ ಎಂದರೆ  ಸಂಸ್ಕೃತಕಾವ್ಯದ ಮಾರ್ಗ ಅನುಸರಿಸದ ದೇಶೀಯಬಂಧದ ಕಾವ್ಯರಚನೆ. ವಾಗೀಶ ಎಂದರೆ ವಾಣೀಪತಿ, ಸರಸ್ವತಿಯ ಗಂಡ ಬ್ರಹ್ಮ.

 

ʼಸಾಸಿರ್ವರುʼ ಎಂದರೆ ಅಗ್ರಹಾರದ ಹಿರಿತನ ಹೊಂದಿದ ಮಹಾಜನರ ಮಂಡಳಿ. ʼನೂರ್ವರುʼ ಎಂದರೂ ಅಂತಹದೇ. ಮಂಡಳಿಯಲ್ಲಿ ಅಕ್ಷರಶಃ ಸಾವಿರ/ನೂರು ಜನರು ಇರತಿದ್ದರು ಎಂದೇನಿಲ್ಲ, ʼಸಾಸಿರ್ವರುʼ ಎಂದರೆ ದೊಡ್ಡ ಮಂಡಳಿ, ʼನೂರ್ವರುʼ ಎಂದರೆ ಅದಕ್ಕಿಂತ ಚಿಕ್ಕ ಮಂಡಳಿ ಅಂತ ಅಷ್ಟೇ..

 

ಪದ್ಯದ ಅರ್ಥ ವ್ಯಾಕರಣ,ಅರ್ಥಶಾಸ್ತ್ರ, ಕಾವ್ಯ-ನಾಟಕ-ವರ್ಣಕವಿತ್ವದಲ್ಲಿ ತೊಡಗಿಕೊಂಡಿರುವ, ವೇದಾಂತ, ಪಾರಮಾರ್ಥಿಕ, ಲೌಕಿಕ ಎಲ್ಲಾ ಕಲೆಗಳಲ್ಲಿ ಬ್ರಹ್ಮನ ಮಹತ್ತಿಗಿಂತಲೂ ಹೆಚ್ಚಿನವರಾದ ಇಲ್ಲಿನ ಸಾವಿರ ಮಹಾಜನರ ಖ್ಯಾತಿಗೆ ಯಾರು ಸಮ ಎನ್ನಲಾದೀತು? 

 

 

ಕ್ರಿ. ೧೦೮೨ರ ಶಾಸನ ( ಇಐ ೧೮ -೨೨/ಸಿ)

ಅದೇ ವೀರಭದ್ರ ದೇವರ ಗುಡಿಯ ಗೂಢಮಂಟಪದಲ್ಲಿ, ಹಿಂದೆ ಹೇಳಿದ ಶಾಸನಕಲ್ಲಿನ ಎದುರಿನ ಗೋಡೆಯಲ್ಲಿ ಅಳವಡಿಸಿರುವ  ಕ್ರಿ. ೧೦೮೨ ಶಾಸನದಲ್ಲಿ ಕಲ್ಯಾಣದ ಚಾಲುಕ್ಯರ ದೊರೆಯಾದ ತ್ರಿಭುವನಮಲ್ಲನ ಆಳ್ವಿಕೆಯಲ್ಲಿ ರವಿಕಿಮಯ್ಯ ನಾಯಕ ಎಂಬುವವನು ನಾರಾಯಣ ದೇವರ ಗುಡಿಗೆ ದತ್ತಿ ಬಿಟ್ಟ ವಿಷಯವಿದೆ.ಈ  ಶಾಸನದಲ್ಲಿಯೂ ಹೂಲಿ-ಹೂಲಿಯ ಮಹಾಜನರು- ಹೂಲಿಯ ಓಣಿಯಾದ ರವಿಯಣಗೇರಿಯ ಮಹಾಜನರ ವರ್ಣಿಸುವ ಪದ್ಯಗಳಿವೆ.

 


 ಪದ್ಯ ೧:

ಹೂಲಿಯನ್ನು ವರ್ಣಿಸುವ ಈ ಪದ್ಯದ ಭಾವ ಹಿಂದಿನ ಶಾಸನದ ಪದ್ಯದಂತಿದ್ದರೂ, ಪದ್ಯದ ಛಂದಸ್ಸು ಕಂದಪದ್ಯವಿದೆ:

 

ಅಂಬುಧಿ ವೃತ ಧರಣಿಗೆ ವದ

ನಂ ಬೆಳ್ವಲ ನಾಡದಕ್ಕೆ ತಿಲಕದವೋಲ್‌ ಚ

ಲ್ವಂ ಬೀರುವ ಪೂಲಿ ಗ್ರಾ

ಮಂ ಬುಧಜನ ನಿಲಯಮೆನಿಪುದಾ ಪುರವರದೊಳ್

 

ಅಂಬುಧಿ ಎಂದರೆ ಸಾಗರ, ಧರಣಿ ಎಂದರೆ ಭೂಮಿ, ಬುಧಜನ ಎಂದರೆ ಪಂಡಿತರು.

ಹಿಂದಿನ ಪದ್ಯದಂತೆಯೇ ಇಲ್ಲಿಯೂ ಕೂಡ ʼಸಾಗರದಿಂದಾವೃತವಾದ ಭೂಮಿಗೆ ಬೆಳ್ವಲ ನಾಡು ಮುಖ, ಹೂಲಿ ಮುಖಕ್ಕೆ ತಿಲಕವಿದ್ದಂತೆ. ಇಂತಹ ಊರಲ್ಲಿ ಪಂಡಿತರ ನೆಲೆಯಿದೆ.ʼ ಎಂಬುದು ಪದ್ಯದ ಅರ್ಥ.

 

ಪದ್ಯ -೨

ಕವಿ ಮುಂದುವರಿದು ಹೂಲಿಯ ಮಹಾಜನರನ್ನು ವರ್ಣಿಸುವ ಕಂದಪದ್ಯ:

ಅಮಿತಗುಣಾನ್ವಿತ ವಿಪ್ರೋ

ತ್ತಮರಿಷ್ಟಾಪೂರ್ತರ್ತನರ್ ಸಾಸಿರ್ವ್ವರ್

ಯಮ ನಿಯಮ ಸ್ವಾಧ್ಯಾಯ

ಪ್ರಮುಖಾಚಾರ‌ರ್ ಸಮಸ್ತ ದೋಷ ವಿದೂರ‌ರ್ ||

ಇಷ್ಟಾಪೂರ್ತ ಎಂದರೆ ಇಷ್ಟ ಕರ್ಮ ಮತ್ತು ಪೂರ್ತಕರ್ಮ. ಇಷ್ಟಕರ್ಮವೆಂದರೆ ಯಜ್ಞಯಾಗಾದಿ ದೇವಕಾರ್ಯಗಳು, ಪೂರ್ತಕರ್ಮವೆಂದರೆ ಕೆರೆ, ಕಟ್ಟಿ, ಬಾವಿ, ತೋಪು ಮುಂತಾದುವುಗಳ ಕಟ್ಟಿಸುವ ಧರ್ಮಕಾರ್ಯ.

 

 ಅಷ್ಠಾಂಗಯೋಗದ ಎಂಟು ಅಂಗಗಳು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ. ಮೊದಲನೆಯ ಅಂಗವಾದ ʼಯಮʼ ಎಂದರೆ ಹಿಂಸೆ, ಅಸತ್ಯ. ಕಳವು, ದುರಾಚಾರ, ಪರಿಗ್ರಹ ಈ ಐದನ್ನು ಬಿಡುವುದು. ಎರಡನೆಯದಾದ ʼನಿಯಮʼ ಎಂದರೆ ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ, ಈಶ್ವರಪ್ರಣಿಧಾನ(ದೇವರನ್ನು ಒಂದೇ ಮನಸ್ಸಿನಿಂದ ಧ್ಯಾನಿಸುವುದು) ಎಂಬ ಐದು ಆಚರಣೆಗಳು.

 

ಪದ್ಯದ ಭಾವಾರ್ಥವನ್ನು ಹೀಗೆ ಹೇಳಬಹುದು - ಅಸಂಖ್ಯ ಸದ್ಗುಣವುಳ್ಳವರಾದ ಇಲ್ಲಿಯ ಸಾವಿರ ಬ್ರಾಹ್ಮಣ ಮಹಾಜನರು, ಇಹಕ್ಕೂ-ಪರಕ್ಕೂ ಸಲ್ಲುವ ನಡುವಳಿಕೆಯಿಂದ, ಯಮ-ನಿಯಮ-ಸ್ವಾಧ್ಯಾಯ ಇತ್ಯಾದಿ ಸತ್ಕರ್ಮಗಳಲ್ಲಿ ತೊಡಗಿದ್ದು ದೋಷರಹಿತರಾಗಿದ್ದರು.

 

ಪದ್ಯ -

ಮುಂದಿನ ಕಂದಪದ್ಯ ಹೂಲಿಯ ಒಂದು ಭಾಗವಾಗಿದ್ದ ರವಿಯಣಗೇರಿಯ ನೂರು ಮಹಾಜನರ ವರ್ಣಿಸುತ್ತದೆ:

 

ಅವರೊಳಗೆ ವೇದಶಾಸ್ತ್ರ

ಪ್ರವರರ್‌ಷಟ್ಕರ್ಮ ನಿರತರೆನಿಪುನ್ನತಿಯಿಂ

ರವಿಯಣಗೇರಿಯ ನೂರ್ವ‌ರ್

ಭುವನದೊಳತಿ ವಿಶದ ಕೀರ್ತಿಯಂ ಪ್ರಕಟಿಸಿದ‌ರ್ ||

ಶಾಸ್ತ್ರಗಳ ಪ್ರಕಾರ ಬ್ರಾಹ್ಮಣರ ಷಟ್ಕರ್ಮಗಳು ಅಂದರೆ ಅವರ ಆರು ಕರ್ತವ್ಯಗಳು ಕಲಿಸುವುದು, ಕಲಿಯುವುದು, ಯಜ್ಞಮಾಡುವುದು-ಮಾಡಿಸುವುದು, ದಾನ ಪಡೆಯುವುದು-ಕೊಡುವುದು.

 

ಕಂದಪದ್ಯದ ಭಾವಾರ್ಥವನ್ನು ಹೀಗೆ ಹೇಳಬಹುದು: ಹೂಲಿಯ ಸಾವಿರ ಹಿರಿಯ ಬ್ರಾಹ್ಮಣ ಮಂಡಳಿಯ ಭಾಗವಾದ ರವಿಯಣಗೇರಿಯ ನೂರು ಬ್ರಾಹ್ಮಣರು ವೇದಶಾಸ್ತ್ರ ಪ್ರವರದಲ್ಲಿಯೂ, ಷಟ್ಕರ್ಮಗಳ ಆಚರಣೆಯಲ್ಲಿ ನಿರತರಾಗಿ ಭೂಮಿಯಲ್ಲಿಯೇ ಪ್ರಕಾಶಮಾನವಾದ ಕೀರ್ತಿ ಪ್ರಕಟಿಸಿದರು

 

 

ಕ್ರಿ..೧೦೯೭ರ ಶಾಸನ ( ಇಐ ೧೮ -೨೨/ಡಿ)

ವೀರಭದ್ರ ದೇವರ ಗುಡಿಯಲ್ಲಿರುವ ಮೂರನೇ ಶಾಸನವು ಕ್ರಿ. ೧೦೯೭ ಕಲ್ಯಾಣದ ಚಾಲುಕ್ಯರ ದೊರೆಯಾದ ತ್ರಿಭುವನಮಲ್ಲನ ಕಾಲದ್ದು. ಅದರಲ್ಲಿ ಸೋಭನನಾಯಕನ ಮಗ ನಾಕಿಮಯ್ಯನು ವಿಷ್ಣುಗುಡಿಯನ್ನು ಜೀರ್ಣೋದ್ದಾರ ಮಾಡಿ, ಅದಕ್ಕೆ ದತ್ತಿ ಬಿಟ್ಟ ವಿಷಯವಿದೆ.

ಶಾಸನದಲ್ಲಿ ಕುಂತಲ ದೇಶ, ಬೆಳವಲ ನಾಡು, ಹೂಲಿ ಅಗ್ರಹಾರ, ಅಲ್ಲಿಯ ಸಾವಿರ ಮಹಾಜನರು, ಹೂಲಿಯ ಭಾಗವಾದ ಕಳಸವಳ್ಳಿಗೇರಿಯ ನೂರು ಮಹಾಜನರ ವರ್ಣನೆಯಿದೆ,

 

ಪದ್ಯ೧:

ʼಮತ್ತೇಭವಿಕ್ರೀಡಿತ ವೃತ್ತʼ ಛಂದಸ್ಸಿನಲ್ಲಿರುವ ಈ ಪದ್ಯದಲ್ಲಿ ಕುಂತಲ-ಬೆಳ್ವಲ-ಹೂಲಿಯ ವರ್ಣನೆಯಿದೆ:

ವಸುಧಾ ವಿಶ್ರುತಮಪ್ಪ ಕುಂತಲ ವಧೂ ಸೌಮ್ಯಾನನಂ ತಾನೆನಲ್ 

ಪಸರಂಬೆತ್ತ ಮಹಾಗ್ರಹಾರ ನಗರ ಶ್ರೀ ಪಟ್ಟಣಾಕೀರ್ಣದಿಂ 

ರಸವದ್ಧಾನ್ಯ ಸಮಸ್ತ ವಸ್ತುಚದಿಂ ಶ್ರೀಬೆಳ್ವಲಂ ಶೋಭಿಸ

ಲ್ಕೆಸೆವಾ ಪೂಲಿ ಮಹಾಗ್ರಹಾರ ತಿಲಕಂ ತದ್ದೇಶದೊಳ್ ರಾಜಿಕುಂ ।।

 

ಪದ್ಯದ ಸರಳಾನುವಾದ:  ಜಗದಲ್ಲಿಯೇ ಪ್ರಸಿದ್ಧ (ವಿಶ್ರುತ)ವಾಗಿಹ ಸುಂದರಿ ಕುಂತಲ, ಅವಳ ಸೌಮ್ಯ ಮುಖವೇ ತಾನೆನ್ನುತ್ತ ಹಲವಾರು ಮಹಾಗ್ರಹಾರ, ನಗರ, ಪಟ್ಟಣಗಳನ್ನು, ದವಸ-ಧಾನ್ಯ-ಸಮಸ್ತ ಸಿರಿಯನ್ನು ಹೊಂದಿ ಶ್ರೀ ಬೆಳ್ವೊಲ ನಾಡು ಶೋಭಿಸುತ್ತಿರಲು, ಹೂಲಿಯೆಂಬ ಮಹಾಗ್ರಹಾರ ಮುಖದ ತಿಲಕದಂತೆ ನಾಡಿನಲ್ಲಿ ರಾಜಿಸುತ್ತಿದೆ.” 

ಪದ್ಯ೨:

ಹಿಂದಿನ ಪದ್ಯದಂತೆಯೇ ʼಮತ್ತೇಭವಿಕ್ರೀಡಿತ ವೃತ್ತʼಲ್ಲಿರುವ ಈ ಪದ್ಯ, ಹೂಲಿಯೊಳಗಿನ ಸೌಂದರ್ಯವನ್ನು ವರ್ಣಿಸುತ್ತದೆ.

 

ಅಲರ್ದಂಭೋರುಹ ರಾಜಿಯಿಂ ಪರಿಮಳ ಶ್ರೀ ಮಲ್ಲಿಕಾರಾಮದಿಂ

ಸಲೆ ಸಂದಿರ್ದ ತಟಾಕ ಕೂಪ ವಿಭವ ಪ್ರಾಕೀರ್ಣದಿಂ ಸುತ್ತುಗೊ

ಡೆಳಸುತ್ತಿರ್ಪ ಸಹಸ್ರ ರಮ್ಯ ಶಿಕೂಟಾನೇಕ ಕೋಟಿ ಪ್ರಭೋ

ಜ್ವಲಿತಂ ತದ್ಬಹಿರಂಗ ಸೇವ್ಯವಿಭವಂ ಶ್ರೀ ಪೂಲಿಯಿಂತೊಪ್ಪುಗುಂ ||

 

 

ʼಅಲರ್‌ʼ ಎಂದರೆ ಅರಳುವುದು, ʼಅಂಭೋರುಹʼ ಎಂದರೆ ಕಮಲ, ʼರಾಜಿʼ ಎಂದರೆ ಸಾಲು. ʼಅಲರ್ದಂಭೋರುಹ ರಾಜಿʼ ಎಂದರೆ ಅರಳಿದ ಕಮಲಗಳ ಸಾಲು.

 

ಪದ್ಯದ ಸರಳಾರ್ಥ : “ಅರಳಿದ ಕಮಲದ ಸಾಲುಗಳಿಂದ, ಸುಗಂಧಭರಿತ ಮಲ್ಲಿಗೆಯ ತೋಟದ ಬಲು ಚಂದದಿಂದ, ಕೊಳ,ಬಾವಿ ಇತ್ಯಾದಿಗಳ ವೈಭವದಿಂದ ಸುತ್ತುವರಿದಿರುವ ಸಾವಿರಾರು ರಮ್ಯ ಶಿವಮಂದಿರಗಳನ್ನು ಹೊಂದಿ, ಶ್ರೀ ಪೂಲಿ ಪ್ರಕಾಶಿಸುತ್ತಿದೆ.”

 

ಪದ್ಯ೩:

ʼಮಹಾಸ್ರಗ್ಧರಾ ವೃತ್ತʼ ಛಂದಸ್ಸಿನಲ್ಲಿರುವ ಈ ಪದ್ಯ ಹೂಲಿಯ ಸಾವಿರ ಮಹಾಜನರನ್ನು ವರ್ಣಿಸುತ್ತದೆ:

ಮುದದಿಂ ಶ್ರೀ ಕೇಶವಾದಿತ್ಯರ ಪದ ವಿನತ‌ರ್ ವೇದ ವೇದಾಂತ ವಿದ್ಯಾ

ವಿದಿತರ್‌ ಷಟ್ತರ್ಕ ಸತ್ಪ್ರೌಢಿಯೊಳತಿಶಯದುದ್ಗ್ರಾಹಕರ್ ನಿತ್ಯಯಜ್ಞರ್

ಮದ ಮಾತ್ಸರ್ಯಾದಿ ದೂರ‌ರ್ ಸಕಲ ವಿಬುಧ ಸಂರಕ್ಷಕ‌ರ್ ಪೂಜ್ಯರೆಂದುಂ

ಸದಯರ್ ಸಾಸಿರ್ವರುರ್ವೀವಿನುತರಖಿಲ ಶಾಸ್ತ್ರಾರ್ಥ ಕಾವ್ಯ ಪ್ರವೀಣ‌ರ್‌ ||

ʼಷಟ್ತರ್ಕʼಗಳು ಎಂದರೆ ಸಾಂಖ್ಯ,ನ್ಯಾಯ, ವೈಶೇಷಿಕ ಎಂಬ ಮೂರು ಆಸ್ತಿಕದರ್ಶನಗಳು ಮತ್ತು ಬೌದ್ಧ,ಆರ್ಹತ ಮತ್ತು ಲೋಕಾಯತ ಎಂಬ  ಮೂರು ನಾಸ್ತಿಕದರ್ಶನಗಳು ಸೇರಿ ಆದ ಆರು ದರ್ಶನಗಳ ಗುಂಪು.  

 

ಪದ್ಯದ ಅರ್ಥ : “ಕೇಶವಾದಿತ್ಯನ ಪಾದಗಳಿಗೆ ಮುದದಿಂದ ನಮಿಸುವ, ವೇದ-ವೇದಾಂಗಳಲ್ಲಿ ಹೆಸರುವಾಸಿಯಾದ, ಷಟ್ತರ್ಕಶಾಸ್ತ್ರಗಳಲ್ಲಿ ಅಸಾಧಾರಣ ಪರಿಣತಿ ಹೊಂದಿರುವ, ದಿನವೂ ಯಜ್ಞಮಾಡುವ, ಮದ-ಮಾತ್ಸರ್ಯಾದಿಗಳಿಂದ ದೂರವಿರುವ, ಎಲ್ಲ ಪಂಡಿತರ ರಕ್ಷಕರು, ಪೂಜ್ಯರು ಆದ ಹೂಲಿಯ ಸಾವಿರ ಮಹಾಜನರು ಜಗತ್ಪ್ರಸಿದ್ಧರು, ಅಖಿಲ ಶಾಸ್ತ್ರಾರ್ಥ ಮತ್ತು ಕಾವ್ಯದಲ್ಲಿ ಗಟ್ಟಿಗರು.”

 

ಪದ್ಯ೪:

ಹೂಲಿಯ ಸಾವಿರ ಮಹಾಜನರನ್ನು ಹೊಗಳುವ ಕಂದ ಪದ್ಯ :

ದಿನಪಂ ತನ್ನ ಕರಂಗಳ

ನನುಪಮದಿಂ ಪೂಲಿಯಲ್ಲಿ ಪುಂಜಿಸಿ ನಿರತಂ

ಜನವಿನುತ‌ರ್ ಸಾಸಿರ್ವರ

ನನವರತಂ ಪಡೆದನಂತದೇಂ ಕೃತಕೃತ್ಯ‌ರ್‌ ||

 

ಸೂರ್ಯನು ಹೂಲಿಯ ಮೇಲೆ ತನ್ನ ಕಿರಣಗಳನ್ನು ನಿರಂತರವಾಗಿ ಅನುಪಮವಾಗಿ ಹರಿಸುತ್ತ, ಜಗತ್ಪ್ರಸಿದ್ಧರಾದ ಸಾವಿರ ಮಹಾಜನರನ್ನು ಸೃಷ್ಟಿಸಿರುವನು, ಅವರೇ ಧನ್ಯರು..

 

ಪದ್ಯ5:

ಹೂಲಿಯ ಭಾಗವಾದ ಕಳಶವಳ್ಳಿಗೇರಿಯ ನೂರು ಮಹಾಜನರನ್ನು ಹೊಗಳುವ ಕಂದ ಪದ್ಯ :

 

 

ಪಲವಗ್ರಹಾರಕೆಲ್ಲಂ

ಸುಲಲಿತದಿಂ ಪೂಲಿ ತಿಲಕಮಲ್ಲಿಗೆ ಕಳಸಂ

ಸಲೆ ಕಳಶವಳ್ಳಿಗೇರಿಯೆ

ವಿಲಸಿತಮಾಗೊಪ್ಪಲೆಸೆದರಂತಾ ನೂರ್ವರ್

 

ಪದ್ಯದ ಅರ್ಥ- “ಅನೇಕ ಅಗ್ರಹಾರಗಳ ನಡುವೆ ಹೂಲಿ ತನ್ನ ಚೆಲುವಿನಿಂದಾಗಿ ತಿಲಕದಂತಿದೆ. ಅಲ್ಲಿಯ ಳಶವಳ್ಳಿಗೇರಿಯು ನಿಜವಾಗಿ ಕಳಸದಂತೆ, ಅಲ್ಲಿನ ನೂರು ಮಹಾಜನರು ಶ್ರೇಷ್ಠರಾಗಿದ್ದಾರೆ.”

 

 

ಉಪಸಂಹಾರ:

ಬರಹದಲ್ಲಿ ಮೂರು ಶಾಸನಗಳ ಪದ್ಯಗಳಲ್ಲಿ ಹೂಲಿಯ ಊರು-ಜನಗಳನ್ನು ವರ್ಣಿಸುವನ್ನಷ್ಟೇ ಚರ್ಚಿಸಲಾಗಿದೆ. ಕಾವ್ಯಾಸಕ್ತರು ಉಳಿದ ಪದ್ಯಗಳನ್ನೂ ಗಮನಿಸಬೇಕಾಗಿ ವಿನಂತಿ.

ಬರಹದ ಎರಡನೇ ಭಾಗದಲ್ಲಿ  ಹೂಲಿಯ ಬೇರೆ ಶಾಸನ ಪದ್ಯಗಳ ಅವಲೋಕನವಿರಲಿದೆ.

ಆಧಾರ:

  1.           Epigraphia Indica Vol 18 : ಶಾಸನ ಸಂಖ್ಯೆ - ೨೨ ಬಿ,ಸಿ ಮತ್ತು ಡಿ
  2.          ಶಾಸನ ಪದ್ಯ ಸಿರಿ – ಸಂಪುಟ ೧ (ಸಂಪಾದಕರು : ಶ್ರೀ ಕೆ.ಆರ್.‌ ಗಣೇಶ ಮತ್ತು ಶ್ರೀ ದೇವರಕೊಂಡಾರೆಡ್ಡಿ)
  3.          ಕ.ಸಾ.ಪ ಕನ್ನಡ ನಿಘಂಟು (ಸಂಪುಟ ೧-೮)

 

ಕಠಿಣ ಪದಗಳ ಅರ್ಥ

·        ·       ಬುಧ = ಪಂಡಿತ
 ·        ಮೇಖಲೆ =  ಒಡ್ಯಾಣ, ಸೊಂಟದ ಪಟ್ಟಿ, ಡಾಬು
·         ಅಂಬುರುಹ = ನೀರಿನಲ್ಲಿ ಹುಟ್ಟಿದ್ದು, ಕಮಲ
·         ಚಯ = ಗುಂಪು, ಮೊತ್ತೆ, ರಾಶಿ; ಸಮೂಹ:
·         ನೆಗಳ್‌ = ತೊಡಗು; ಕೈಗೊಳ್ಳು
·         ಅಲರ್‌=  ಅರಳು
·         ಸಲೆ= ಬಹಳವಾಗಿ, ಬಲು
·         ರಾಜಿ =  ಸಾಲು; ಓಳಿ
·         ವಿಶದ = ಶುಭ್ರವಾದ, ಸ್ವಚ್ಛವಾದ, ಬಿಳುಪಾದ, ಧವಳ ಸ್ಫುಟವಾದ, ಚೆಲುವಾದ
·         ವಿಭವ = ಐಶ್ವರ್ಯ, ಸಿರಿ, ಸಂಪತ್ತು, ಶಕ್ತಿ, ಬಲ.
·         ಪ್ರಾಕೀರ್ಣ = ??
·         ಸೇವ್ಯ = ಪೂಜ್ಯ
·         ಒಪ್ಪು = ಪ್ರಕಾಶಿಸು, ಶೋಭಿಸು
·         ವಿಲಸಿತ, ವಿಳಸಿತ = ಪ್ರಕಾಶಿಸುವ ; ಹೊಳೆಯುವ
·         ಪುಂಜಿಸು = ಗುಡ್ಡೆ ಮಾಡು

No comments:

Post a Comment