(ಆಕೃತಿ ಕನ್ನಡ ಜಾಲತಾಣದಲ್ಲಿ “ಹರನ ಕೊರಳ ಹೂಮಾಲೆ” ಸರಣಿಯಲ್ಲಿ ಪ್ರಕಟವಾದ ಬರಹ )
ಹೂಲಿಯಲ್ಲಿ ಅಂಧಕೇಶ್ವರ ಗುಡಿ ಇದೆ. ಶಾಸನಗಳಲ್ಲಿ ಅದನ್ನು “ಅಂಧಾಸುರ ದೇವರು” ಎಂದೂ ಕರೆಯಲಾಗಿದೆ. ಯಾರು ಈ ಅಂಧಾಸುರ ಅಥವಾ ಅಂಧಕಾಸುರ ? ಅವನಿಗೂ ಹೂಲಿಗೂ ಏನು ಸಂಬಂಧ ?
ಅಂಧಕಾಸುರನ
ಬಗ್ಗೆ ಹಲವು ಪುರಾಣಗಳು ಹಲವು ಕತೆಗಳನ್ನು ಹೇಳಿವೆ. ಶಿವ ಪುರಾಣದ ಪ್ರಕಾರ ಧ್ಯಾನಸ್ಥ ಶಿವನ ಕಣ್ಣುಗಳನ್ನು
ಹುಡುಗಾಟಕ್ಕಾಗಿ ಪಾರ್ವತಿಯು ಮುಚ್ಚಿದಾಗ, ಕೆಂಗಣ್ಣಿನ ಬಿಸಿಗೆ ಆಕೆಯ ಕೈ ಬೆವತು, ಬೆವರಿನ ಒಂದು ಹನಿ
ನೆಲಕ್ಕೆ ಬೀಳುತ್ತದೆ. ಅದರಿಂದ ಒಂದು ಭಯಂಕರ ಕುರುಡ ಕೂಸು ಹುಟ್ಟುತ್ತದೆ. ಆ ಕೂಸನ್ನು ಶಿವ, ಹಿರಣ್ಯಾಕ್ಷನೆಂಬ
ಅಸುರನು ಪುತ್ರಪ್ರಾಪ್ತಿಗಾಗಿ ತಪಸ್ಸು ಮಾಡಿದಾಗ, ಅವನಿಗೆ ಕೊಡುತ್ತಾನೆ. ಆ ಕೂಸೇ ಮುಂದೆ ಅಂಧಕಾಸುರನೆಂದು
ಹೆಸರಾಗುತ್ತದೆ.
ಅಂಧಕಾಸುರ ತಪಸ್ಸು ಮಾಡಿ, ಬ್ರಹ್ಮನಿಂದ ದೃಷ್ಟಿ, ಅಗಾಧ ಶಕ್ತಿ ಮತ್ತು ಶಿವನೊಬ್ಬನ್ನು ಬಿಟ್ಟು ಬೇರಾರಿಂದಲೂ ಸಾವು ಬರದು ಎಂಬ ವರ ಪಡೆಯುತ್ತಾನೆ. ನಂತರ ದೇವತೆಗಳ ಮೇಲೆಯೇ ಯುದ್ಧಸಾರಿ ಅವರಿಗೆ ಸವಾಲೆಸೆಯುತ್ತಾನೆ. ಮುಂದಿನ ಕತೆಯನ್ನು ಹೂಲಿಯಲ್ಲಿದ್ದ ೧೭ನೇ ಶತಮಾನದ ಶಿವಕವಿ ಸಿದ್ಧನಂಜೇಶ ತನ್ನ ಕೃತಿ ʼಗುರುರಾಜ ಚಾರಿತ್ರʼದ ಪದ್ಯಗಳಲ್ಲಿನೋಡೋಣ.
(ಹಿಂದಿನ ಸಂಚಿಕೆಯಲ್ಲಿ ʼಗುರುರಾಜ ಚಾರಿತ್ರʼದಲ್ಲಿನ ಹೂಲಿಯ ವರ್ಣನೆಯನ್ನು ಈಗಾಗಲೇ ಓದಿದ್ದೀರಿ)
ಗುರುರಾಜ ಚಾರಿತ್ರದಲ್ಲಿ ಅಂಧಕಾಸುರನ ಕತೆ
ʼಗುರುರಾಜ ಚಾರಿತ್ರʼದ ಒಂದನೆ ಅಧ್ಯಾಯದಲ್ಲಿ ಕವಿ ಹೂಲಿಯ
ಹಿರಿಮೆಯನ್ನು ವರ್ಣಿಸುವ ಮುನ್ನ ಹಿನ್ನೆಲೆಯಾಗಿ ಅಂಧಕಾಸುರನ ಕತೆಯನ್ನು ೬ ಷಟ್ಪದಿ ಪದ್ಯಗಳಲ್ಲಿ
( ಪದ್ಯ ಸಂಖ್ಯೆ ೧೮ ರಿಂದ ೨೩) ವರ್ಣಿಸಿದ್ದಾನೆ. ಆ ಪದ್ಯಗಳನ್ನು ಓದಿ, ಅವುಗಳ ಭಾವಾರ್ಥವನ್ನು ತಿಳಿದುಕೊಂಡು,
ಹೂಲಿಗೂ ಅಂಧಕಾಸುರನಿಗೂ ಇರುವ ಸಂಬಂಧದ ಐತಿಹ್ಯ ಗೊತ್ತುಮಾಡಿಕೊಳ್ಳೋಣ ಬನ್ನಿ.
ಪದ್ಯ೧:
ಒಂದು
ಕಲ್ಪದೊಳಂಧಕಾಸುರಂ ಸೊಕ್ಕಿ ಸುರ
ವೃಂದಮಂ
ಪೀಡಿಸಲು ಸುರಪ ಪರಮೇಷ್ಠಿ ಗೋ
ವಿಂದ
ಮುಖ್ಯರು ಯುದ್ಧದಲ್ಲಿ ಸೆಡೆದೋಡಿ ಬಂದೀಶಂಗೆ ಮೊರೆಯಿಕ್ಕಲು
ಅಂದವರಿಗಭಯಮಂ ಕೊಟ್ಟು ತನಗಿದಿರಾದ
ಅಂಧಕಾಸುರನ
ಶೂಲದೊಳಿರಿದು ನೆಗಹಿ ಭರ
ದಿಂದ ಧಾತ್ರಿಗೆ ಕೆಡಹಿಯೆರ್ದೆಯ ತುಳಿದಾಡಿದಂ ಡಮರುಗಧ್ವನಿಯ
ಗತಿಗೆ ||೧೮||
ಒಂದು ಕಲ್ಪದಲ್ಲಿ ಅಂಧಕಾಸುರನು ಸೊಕ್ಕಿ ದೇವವೃಂದವನ್ನು ಪೀಡಿಸಲು, ಸುರಪ – ಎಂದರೆ ದೇವತೆಗಳ ರಾಜನಾದ ಇಂದ್ರ, ಪರಮೇಷ್ಠಿ – ಎಂದರೆ ಬ್ರಹ್ಮ, ವಿಷ್ಣು ಮುಂತಾದವರು ಯುದ್ಧದಲ್ಲಿ ಸೋತು ಶಿವನಿಗೆ ಮೊರೆಯಿಟ್ಟರು.
ಅವರಿಗೆ ಅಭಯಕೊಟ್ಟು ತನಗೆ ಇದಿರಾದ ಅಂಧಕಾಸುರನನ್ನು ತ್ರಿಶೂಲದಿಂದಿರಿದು, ಮೇಲಕ್ಕೆತ್ತಿ, ಭೂಮಿಗೆ ಕೆಡಹಿ, ಅವನ ಎದೆಯ ತುಳಿದು ಡಮರುಗದ ಗತಿಗೆ ಶಿವನು ಕುಣಿದಾಡಿದನು.
ಪದ್ಯ೨:
ಹರಿ
ಪಟಹಮಂ ಝಕಕು ಝಕಕೆಂದು ಬಾಜಿಸಲು
ಶರವಣೋದ್ಭವ
ನಂದಿಕೇಶ ಮದ್ದಳೆಗಳಂ
ಹರುಷದಿಂ ಧಿಂಧಿಮಿಕಿಟೆಂದು
ಧ್ವನಿಮಾಡೆ ಸಾರಸಸಂಭವಂ ತಾಳವ
ತರಿಕು ತರಿದಿಕ್ಕು ತಿರಕಿಟಮೆಂದು ನುಡಿಸೆ ವಾಕ್
ತರುಣಿ
ನಾರದರು ಸರಿಗಮಪಧನಿಯೆಂಬೇಳು
ಸ್ವರಗಳಂ
ವೀಣೆಯೊಳು ಮಿಡಿದು ನುಡಿಸಲು ಭರತಕಟ್ಟಳೆಗೆ ಕುಣಿದನೀಶಂ ||೧೯||
ಹರನು ಅಂಧಕಾಸುರನನ್ನು
ಸೋಲಿಸಿದ್ದನ್ನು ನೋಡಿ, ಆಗ ಹರಿಯು ಝಕಕುಝಕಕೆಂದು ಪಟಹವನ್ನು- ಪಟಹ ಎಂದರೆ ಭೇರಿ- ನುಡಿಸಿದನು. ಷಣ್ಮುಖ ನಂದಿಕೇಶರು ಮದ್ದಳೆಗಳನ್ನು ಧಿಂಧಿಮಿಕಿಟೆಂದು ಧ್ವನಿಮಾಡಿದರು. ಬ್ರಹ್ಮ ತರಿಕು ತರಿದಿಕ್ಕು
ತಿರಕಿಟವೆಂದು ತಾಳವನ್ನು ನುಡಿಸಿದನು. ಸರಸ್ವತಿನಾರದರು ಸರಿಗಮ ಸಪ್ತಸ್ವರಗಳನ್ನು ವೀಣೆಯಲ್ಲಿ
ಮಿಡಿದು ನುಡಿಸಿದರು. ಭರತಮುನಿ ತನ್ನ ನಾಟ್ಯಶಾಸ್ತ್ರದಲ್ಲಿ
ಹೇಳಿದ ಕುಣಿತದ ಕಟ್ಟಳೆಯಂತೆ
ಈಶ ನಾಟ್ಯವಾಡಿದನು.
ಇಲ್ಲಿ ಸಾರಸಸಂಭವ ಎಂದರೆ ಬ್ರಹ್ಮ. ಸಾರಸ ಎಂದರೆ ಕಮಲ, ಕಮಲದಲ್ಲಿ ಹುಟ್ಟಿದವನು ಎಂದರೆ ಬ್ರಹ್ಮ. ಹಾಗೆಯೇ ಶರವಣ ಎಂದರೆ ಜೊಂಡಿನ ಮೇಳೆ. ಶರವಣೋದ್ಭವ ಜೊಂಡಿನ ಪೊದೆಯಲ್ಲಿ ಹುಟ್ಟಿದವನು – ಸ್ಕಂದ, ಷಣ್ಮುಕ.
ಪದ್ಯ೩:
ಸುರರುಘೇ
ಚಾಂಗು ಭಲರೆಂದು ಪೂಮಳೆಗಳಂ
ಸುರಿಯೆ
ಮನುಮುನಿಗಳಾಶೀರ್ವಾದಮಂ ಮಾಡು
ತಿರೆ
ಸಕಲ ದಿಗ್‌ವರರು ಕೈಯೆತ್ತಿ ಕೀರ್ತಿಸಲು ರುದ್ರಪ್ರಮಥಪ್ರಚಯವು
ಕರಗಳಂ ಮುಗಿದು ಶಿವ ಶಾಂತಾಯ ನಮೊ ಎಂದು
ಸ್ಮರಿಸುತಿರಲಂಧಕಾಸುರನು
ಗಹಗಹಿಸಿ ನಗು
ತಿರಲೊಡಂ
ಹರ ನಗೆಯದೇಕೆಂದು ಕೇಳಲಾ ದೈತ್ಯಪತಿ ಬಿನ್ನವಿಸಿದಂ ||೨೦||
ಆಗ ಸುರರು “ಚಾಂಗು, ಭಲರೆ” ಎಂದು ಹೂಮಳೆ ಕರೆಯುತ್ತಿರೆ, ಮನು ಮುಂತಾದ ಮುನಿಗಳು ಆಶೀರ್ವಾದ ಮಾಡುತ್ತಿದ್ದರು, ದಿಕ್ಪಾಲಕರು ಶಿವನ ಕೀರ್ತಿಯನ್ನು ಬಿತ್ತರಿಸುತ್ತಿರಿಸಲು, ರುದ್ರನ ಪ್ರಮಥ ಗಣಂಗಳು ಕೈಮುಗಿದು ಸ್ತುತಿಸುತ್ತಿರಲು ಅಂಧಕಾಸುರನು ಗಹಗಹಿಸಿ ನಗಹತ್ತಿದನು. ಶಿವನು, ನಗುವುದೇಕೆಂದು ಕೇಳಲು
ಅಂಧಕಾಸುರನು ಉತ್ತರಿಸಿದನು..
ಪದ್ಯ೪:
ಸರಸಿಜೋದ್ಭವ
ಹಂಸೆಯಾಗಿ ನಿಮ್ಮಯ ಮಕುಟ
ದಿರವ
ಕಾಣದೆ ತೊಳಲಿದಂ ಹಂದಿಯಾಗಿ ಹರಿ
ಚರಣಮಂ
ಕಾಣದಳಲಿದನಲಾ ನೀವೆನ್ನನಿರಿದು ಮೇಲಕ್ಕೆ ನೆಗಹೆ
ಪರಮ ನಿಮ್ಮಯ ಮಕುಟಮಂ ಕಂಡೆ ತುಳಿದರ್‍ದೆ ಯೊ
ಳಿರದೆ
ನರ್‍ತಿಸಲು ಶ್ರೀಚರಣಮಂ ಕಂಡೆನಜ
ಹರಿ ದೇವತೆಗಳೊಳಗೆ ಧನ್ಯ ನಾನೇ ಎಂಬ ಪಿರಿದು ಸಂತೋಷವೆಂದಂ ||೨೧||
ಅಂಧಕಾಸುರನ
ಉತ್ತರ “ನಿಮ್ಮ ಮಕುಟವನ್ನು ನಿಮ್ಮ ಶ್ರೀ ಚರಣವನ್ನು ಬ್ರಹ್ಮ ಮತ್ತು ವಿಷ್ಣು ಕಾಣದೆ
ಹೋದರು. ನೀವು ನನ್ನನ್ನು ಇರಿದು ಮೇಲಕ್ಕೆತ್ತಲು ನಿಮ್ಮ ಮಕುಟವನ್ನು ಕಂಡೆ, ನನ್ನ ಎದೆಯ ಮೇಲೆ ಕುಣಿದಾಡಲು ನಿಮ್ಮ ಶ್ರೀಚರಣವನ್ನು ಕಂಡೆ, ಅವರಿಂದ ನಾನೇ ಬ್ರಹ್ಮ-ವಿಷ್ಣು-ದೇವತೆಗಳಿಗಿಂತ ಧನ್ಯನೆಂಬ ಸಂತೋಷವೇ
ನನ್ನ ನಗೆಗೆ ಕಾರಣ ”
ಪದ್ಯ೫:
ಮೊದಲೆ
ನಿಮಗೋಸ್ಕರಂ ಶರಣೆಂಬೆ ವೃಷಪಾಲಿ
ತ್ರಿದಶೇಶಗುಗ್ರಧನ್ವಿಗೆ
ಧಾತ್ರಿವಾರಿವ್ಯೋ
ಮಧನಂಜಯಂಮರುನ್ಮೂರ್ತಿಗಂ
ವಿಶ್ವಸಂಭವಗೆಯಾ ಸಿತಿಕಂಠಗೆ
ಮದನಾರಿಗಂ ಗೌರವಗೆ ಲೋಹಿತಾಂಗಂಗೆ
ವಿದಿತ
ಶಬ್ದ ಸ್ಪರ್ಶರೂಪರಸಗಂಧಾದಿ
ವಿದಿತತನ್ಮಾತ್ರಹೇತುವಿಗೆ ಸರ್ವಜ್ಞಂಗೆ ವಾಮದೇವಂಗೆರಗುವೆಂ
ಈ ಪದ್ಯದಲ್ಲಿ
ಅಂಧಕಾಸುರ ಶಿವನನ್ನು ವಿವಿಧ ಹೆಸರುಗಳಿಂದ ಪ್ರಾರ್ಥಿಸುತ್ತಾನೆ. ಈ ಪದ್ಯದಲ್ಲಿ ಶಿವನಿಗೆ ಬಳಸಿರುವ
ವಿಶೇಷಣಗಳ ಬಗ್ಗೆ ಒಂಚೂರು ಚರ್ಚಿಸೋಣ:
- ವೃಷʼ ಎಂದರೆ ನಂದಿ, ‘ವೃಷಪಾಲಿ’
ಎಂದರೆ ನಂದಿಯ ಒಡೆಯ.
- ʼತ್ರಿದಶʼ ಎಂದರೆ ಬಾಲ್ಯ, ಕೌಮಾರ್ಯ,ಯೌವನ
ಎಂಬ ಮೂರೇ ಅವಸ್ಥೆಗಳನ್ನು ಹೊಂದಿರೋರು, ವೃದ್ಧಾಪ್ಯವಿರದವರು, ದೇವತೆಗಳು. ತ್ರಿದಶೇಶ ಎಂದರೆ ದೇವತೆಗಳ ಒಡೆಯ.
- ʼಧನ್ವಿʼ ಎಂದರೆ ಬಿಲ್ಲುಗಾರ. ʼಉಗ್ರಧನ್ವಿʼ ಎಂದರೆ ಪ್ರಚಂಡ ಬಿಲ್ಲುಗಾರ.
- ‘ಸಿತಿ’ ಎಂದರೆ ಕಪ್ಪು, ಸಿತಿಕಂಠ ಎಂದರೆ ಕಪ್ಪು ಕೊರಳುಳ್ಳವನು; ನೀಲಕಂಠ.
- ಲೋಹಿತಾಂಗ ಎಂದರೆ ಕೆಂಪು ಅಂಗ ಉಳ್ಳವುನು.
ಶಿವನಿಗೆ ಲೋಹಿತಾಕ್ಷ – ಕೆಂಪು ಕಣ್ಣುವಿರುವನು – ಎಂಬ ಪದ ಬಳಕೆಯಲ್ಲಿದೆ, ಆದರೆ ಬಹುಶಃ ಉಳಿದ್ಯಾವ
ಕವಿಗಳು ಶಿವನಿಗೆ ʼಲೋಹಿತಾಂಗʼ ಹೆಸರು ಬಳಸಿದಂತೆ ಇಲ್ಲ.
- ತನ್ಮಾತ್ರ ಎಂದರೆ ಶಬ್ದ, ಸ್ಪರ್ಶ, ರೂಪ, ರಸ,
ಗಂಧ ಎಂಬ ಪಂಚಮಹಾಭೂತಗಳಿಗೆ ಕಾರಣಗಳಾದ ಐದು ಸೂಕ್ಷ್ಮ ದ್ರವ್ಯಗಳು. ತನ್ಮಾತ್ರಕ್ಕೆ ಕಾರಣೀಭೂತನಾದವನು ಶಿವ.
ಪದ್ಯ೬:
ಇಂತೆನುತ್ತಾರು ಶ್ಲೋಕದಿ ಶಿವಗೆ ನಮೊ ಎನಲು
ಕಂತುಮರ್ದನ
ದೈತ್ಯಗಂ ಮೆಚ್ಚಿ
ಗಣಪದವ
ಸಂತಸದೊಳಿತ್ತಂಧಕಾಸುರವರದಲಿಂಗವೆಸೆವ
ದಿವ್ಯ ಕ್ಷೇತ್ರವು
ಅಂತು ಶ್ರೀರಾಮಲಕ್ಷ್ಮಣರುಮಾ ಕ್ಷೇತ್ರದೊಳು
ತಂತಮ್ಮ ನಾಮ ಲಿಂಗಂಗಳಂ ಭಜಿಸಿಯ
ತ್ಯಂತ ಸಿದ್ಧಿಗಳ ಪಡೆದನಘಪುಣ್ಯ ಕ್ಷೇತ್ರಮೆಸೆಗು ಹೂಲಿಯ ಕ್ಷೇತ್ರವು ||೨೩||
ಹೀಗೆ ಸ್ತುತಿಸಲು ಶಂಕರನು ಮೆಚ್ಚಿ ಅಂಧಕಾಸುರನಿಗೆ ಗಣಪದವನ್ನು
ಕೊಟ್ಟನು. ಅಂಥ ಅಂಧಕಾಸುರ ವರದ ಲಿಂಗವು
ಶೋಭಿಸುವ, ರಾಮಲಕ್ಷ್ಮಣ ತಂತಮ್ಮ ಹೆಸರಿನ
ಲಿಂಗಗಳನ್ನು ಭಜಿಸಿ ಸಿದ್ಧಿ ವಡೆದ ಪುಣ್ಯ ಕ್ಷೇತ್ರ ಹೂಲಿ.
ಐತಿಹ್ಯಗಳು
ಮೇಲಿನ ಪದ್ಯದಲ್ಲಿ ಸಿದ್ಧನಂಜೇಶ ಹೇಳಿದಂತೆ ಶಿವ ಅಂಧಕಾಸುರನಿಗೆ ಗಣಪದ ಕೊಟ್ಟಿರುವ
ಗುರುತಿಗಾಗಿಯೇ ಅಂಧಕೇಶ್ವರ ಗುಡಿ ಕಟ್ಟಲಾಗಿದೆ ಎಂಬ ಐತಿಹ್ಯ ಈಗಲೂ ಇದೆ. ಕಾವ್ಯದಲ್ಲಿ ಉಲ್ಲೇಖವಾಗಿಲ್ಲವಾದರೂ
ತಾರಕಾಸುರನ ಕಾರಣಕ್ಕಾಗಿ ತಾರಕೇಶ್ವರ ಗುಡಿ ಎಂಬ ಐತಿಹ್ಯವೂ ಇದೆ.
ಪದ್ಯದಲ್ಲಿ ಹೇಳಿದಂತೆ ರಾಮಲಕ್ಷ್ಮಣರು ಹೂಲಿಯಲ್ಲಿ ತಮ್ಮ ಹೆಸರಿನ ಲಿಂಗ ಸ್ಥಾಪಿಸಿ ಪೂಜಿಸಿದ್ದರು ಎಂಬ ಐತಿಹ್ಯ ಕೂಡ ಈಗಲೂ ಜನಮಾನಸದಲ್ಲಿದೆ.
ಕುಲಕರ್ಣಿಯವರ ತೋಟದಲ್ಲಿರುವ “ರಾಮರ ಬಾವಿ”ಯಲ್ಲಿ ರಾಮ-ಲಕ್ಷ್ಮಣರು ಸ್ನಾನ ಮಾಡಿ, ಅದರ ದಡದಲ್ಲಿ ಶಿವಲಿಂಗ
ಸ್ಥಾಪನೆ ಮಾಡಿ ಪೂಜೆ ಮಾಡಿದ್ದರು ಎಂದು ಹೇಳಲಾಗುತ್ತದೆ.
ಚಿತ್ರ 2 ರಾಮರ ಭಾವಿ
ಚಿತ್ರ 3 ʼರಾಮರ ಬಾವಿʼಯ ದಡದಲ್ಲಿರುವ, ರಾಮಲಕ್ಷ್ಮಣರಿಂದ ಪ್ರತಿಷ್ಠಾಪನೆಯಾಗಿದೆ ಎಂದು ಹೇಳಲಾಗುವ ಶಿವಲಿಂಗ (ಕೆಲದಿನಗಳ ಹಿಂದೆ ಜೀರ್ಣೋದ್ಧಾರಗೊಂಡಿದೆ)
ಆಭಾರ ಮನ್ನಣೆ:
ಗುರುರಾಜ ಚಾರಿತ್ರದ ಪದ್ಯಗಳನ್ನು ಅರ್ಥೈಸಿಕೊಳ್ಳಲು
ಮಾರ್ಗದರ್ಶನ ಮಾಡಿದ ನಾಡಿನ ಖ್ಯಾತ ವಿದ್ವಾಂಸರಾದ ಡಾ. ಕೆ.ಆರ್.ಗಣೇಶ ಮತ್ತು ಬರಹಕ್ಕೆ ಚಿತ್ರಗಳನ್ನು ಒದಗಿಸಿದ ಶ್ರೀ ನಿತಿನ ಅವರಿಗೆ
ಬರಹಗಾರ ಆಭಾರಿಯಾಗಿದ್ದಾನೆ.
ಆಧಾರ:
·
ಶ್ರೀ
ಸಿದ್ಧನಂಜೇಶ ವಿರಚಿತ ಶ್ರೀ ಗುರುರಾಜ ಚಾರಿತ್ರ – ಸಂ: ಪ್ರೋ. ಸಂ.ಶಿ.ಭೂಸನೂರಮಠ (೧೯೫೦)
ಕಠಿಣ ಪದಗಳ ಅರ್ಥ
ಸುರಪ = ಸುರರ
ರಾಜ, ಇಂದ್ರ,
ಪರಮೇಷ್ಠಿ = ಬ್ರಹ್ಮ
ಸರಸಿಜೋದ್ಭವ = ಬ್ರಹ್ಮ. ಸರಸ್ಸು ಎಂದರೆ ಕಮಲ,
ಕಮಲದಲ್ಲಿ ಹುಟ್ಟಿದವನು ಬ್ರಹ್ಮ.
ಧಾತ್ರಿವಾರಿವ್ಯೂಮ = ಭೂಮಿ-ಸಾಗರ-ಆಕಾಶ
ಧನಂಜಯ = ಅಗ್ನಿ
ಲೋಹಿತಾಂಗ = ಕೆಂಪು ದೇಹ ಉಳ್ಳವನು, ಮಂಗಳಗ್ರಹ. ಇಲ್ಲಿ ಶಿವ.
ವಿದಿತ = ಬಲ್ಲ ; ತಿಳಿದ ; ಅರಿತ.
ತನ್ಮಾತ್ರ = ಪಂಚಮಹಾಭೂತಗಳಿಗೆ ಕಾರಣಗಳಾದ ಐದು
ಸೂಕ್ಷ್ಮ ದ್ರವ್ಯಗಳು ; ಗಂಧ, ರಸ್ತ ರೂಪ, ಸ್ಪರ್ಶ, ಶಬ್ದಗಳೆಂಬ ಐದು ದ್ರವ್ಯಗಳು.
ಕಂತುಮರ್ದನ = ಶಿವ , ಕಂತು = ಮನ್ಮಥ
No comments:
Post a Comment